ಹನೂರು: ಧಾರಾಕಾರ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿ ಮೂವರು ಮಕ್ಕಳು ಮೃತಪಟ್ಟಿದ್ದ ರಾಮೇಗೌಡನದೊಡ್ಡಿ ಗ್ರಾಮಕ್ಕೆ ಶಾಸಕ ನರೇಂದ್ರ, ಜಿಲ್ಲಾಧಿಕಾರಿ ಕಾವೇರಿ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ತೆರಳಿ ಘಟನೆ ಸಂಬಂಧ ಮಾಹಿತಿ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಾಲೂಕಿನ ರಾಮೇಗೌಡನದೊಡ್ಡಿಯಲ್ಲಿ ಜಮೀನಿಗೆ ತೆರಳುತ್ತಿದ್ದ ಅನುಪಮ(5), ನಿಖಿತಾ(6) ಮತ್ತು ಪ್ರಣಿತ (5) ಮೂವರು ಮಕ್ಕಳು ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಭಾನುವಾರ ಮೃತಪಟ್ಟಿದ್ದರು.
ಶಾಸಕ, ಜಿಲ್ಲಾಧಿಕಾರಿ ಭೇಟಿ: ಘಟನೆ ಹಿನ್ನೆಲೆ ಶಾಸಕ ನರೇಂದ್ರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ತಹಶೀಲ್ದಾರ್ ನಾಗರಾಜು ಭೇಟಿ ನೀಡಿ ಘಟನೆ ಬಗ್ಗೆ ಮೃತ ಮಕ್ಕಳ ಪೋಷಕರು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದರು. ಇದೇ ವೇಳೆ ಶಾಸಕ ನರೇಂದ್ರ ವೈಯಕ್ತಿಕ ಸಹಾಯ ಧನ ನೀಡಿ ಈ ಹಣವನ್ನು ಇಂದಿನ ಅಂತ್ಯಸಂಸ್ಕಾರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿ, ಪ್ರಕೃತಿ ವಿಕೋಪ ನಿಧಿಯಡಿ ತಲಾ 5 ಲಕ್ಷರೂ.ಗಳ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಸೇತುವೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ: ಪರಿಹಾರ ಹಣಕ್ಕಾಗಿ ಅಗತ್ಯವಾದ ದಾಖಲಾತಿಗಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಮುಂದಿನ ಒಂದು ವಾರದೊಳಗಾಗಿ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ ಘಟನೆ ನಡೆದ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ತಿಳಿಸಿದರು.
ಸ್ಮಶಾನ, ಬಸ್‌ಗಾಗಿ ಜಿಲ್ಲಾಧಿಕಾರಿಗೆ ಮನವಿ: ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ಗ್ರಾಮಸ್ಥರು ಗ್ರಾಮಕ್ಕೆ ಬೆಳಗ್ಗೆ 9 ಗಂಟೆಗೆ ಬಸ್ ನಿಯೋಜನೆ ಮಾಡಿಕೊಡಬೇಕು. ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಮತ್ತು ಪೊನ್ನಾಚಿ ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕಿಯರನ್ನು ನೇಮಕ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗವನ್ನು ಗುರುತಿಸಿ ಸ್ಮಶಾನ ನೀಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಮತ್ತು ಗ್ರಾಮಕ್ಕೆ ಅವಶ್ಯಕವಾದ ಬಸ್ ಸೇವೆ ಮತ್ತು ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕಿಯರನ್ನು ನಿಯೋಜಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದರು.
ಮುಗಿಲು ಮುಟ್ಟಿದ ಆಕ್ರಂದನ: ಕಾಡಂಚಿನ ಕುಗ್ರಾಮದಲ್ಲಿ ಒಂದೇ ದಿನ 3 ಮಕ್ಕಳು ನೀರು ಪಾಲಾದ ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಮ.ಬೆಟ್ಟ ವೈದ್ಯಾಧಿಕಾರಿ ರಾಜೇಶ್ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದರು. ಮಧ್ಯಾಹ್ನ 1 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿತು. ಅಂತ್ಯಸಂಸ್ಕರಾದ ವೇಳೆ ಮೃತ ಮಕ್ಕಳ ಪೋಷಕರು, ಕುಟುಂಬಸ್ಥರು, ಸಂಬಂಧಿಕರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.