Advertisement

ಲವ್‌ ಜಿಹಾದ್‌ಗೆ “ವಿಐಪಿ’ನೆರಳು?

06:00 AM Jul 01, 2018 | Team Udayavani |

ಬೆಂಗಳೂರು/ಕಲಬುರಗಿ: ಕೇರಳದ ಲವ್‌ ಜಿಹಾದ್‌ ಪ್ರಕರಣದಲ್ಲಿ ಕಲಬುರಗಿಯ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್‌ ಖಾನ್‌ ಅವರ ಪತ್ನಿ ಭಾಗಿಯಾಗಿರುವ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಹಿರಂಗ ಪಡಿಸಿದೆ. ಈ ಸಂಬಂಧ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು, ಇರ್ಷಾದ್‌ ಖಾನ್‌ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.

Advertisement

ಕಳೆದ ಜನವರಿಯಲ್ಲಿ ಕೇರಳದಲ್ಲಿ ದಾಖಲಾದ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ಕೇರಳ ಎನ್‌ಐ ಅಧಿಕಾರಿಗಳು ದೊಮ್ಮಲೂರು ಬಳಿಯ ಡೈಮಂಡ್‌ ಡಿಸ್ಟ್ರಿಕ್ಟ್‌ನಲ್ಲಿರುವ ಇರ್ಷಾದ್‌ ಖಾನ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಇರ್ಷಾದ್‌ ಖಾನ್‌ ಅವರ ಪತ್ನಿ “ಲವ್‌ ಜಿಹಾದ್‌’ಗೆ ಪ್ರೇರಣೆ ನೀಡುತ್ತಿರುವ ಕುರಿತ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ದಾಳಿಯಾಗಿರುವುದನ್ನು ಒಪ್ಪಿಕೊಂಡಿರುವ ಇರ್ಷಾದ್‌ ಖಾನ್‌ ಅವರು, ತಮ್ಮ ಪತ್ನಿ ಆ ಹುಡುಗಿಯೊಂದಿಗೆ ಒಮ್ಮೆ ಮಾತ್ರ ಮಾತನಾಡಿಸಿದ್ದನ್ನು ಬಿಟ್ಟರೆ ಲವ್‌ ಜಿಹಾದ್‌ನಲ್ಲಿ ಯಾವುದೇ ಪಾತ್ರವಿಲ್ಲ. ಆಕೆಯ ಪರಿಚಯವೂ ಇಲ್ಲ. ಆದರೆ ಲವ್‌ ಜಿಹಾದ್‌ ಅನುಮಾನದಡಿ ತನಿಖಾಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಜತೆಗೆ ಹಲವು ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂದರು.

ಎನ್‌ಐಎಯಿಂದ ವಿಚಾರಣೆ: 8 ಲ್ಯಾಪ್‌ಟಾಪ್‌ಗ್ಳು, 12 ಮೊಬೈಲ್‌ಗ‌ಳನ್ನು ಜಪ್ತಿ ಮಾಡಿದ್ದು, ಇರ್ಷಾದ್‌ ಖಾನ್‌ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಇವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಹಿಂದೂ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದರು ಎಂಬುದು ದಾಖಲೆಗಳ ಮೂಲಕ ತಿಳಿದು ಬಂದಿರುವುದಾಗಿ ಎನ್‌ಐಎ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?
ಮೂರು ವರ್ಷಗಳ ಹಿಂದೆ ಕೇರಳ ಮೂಲದ ಹಿಂದೂ ಯುವತಿ ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಉದ್ಯಮಿಯೊಬ್ಬರ ಪುತ್ರ ನಜೀರ್‌ ಖಾನ್‌ ಎಂಬಾತ ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸಿ ವಿವಾಹ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ನಂತರ ಆಕೆಗೆ ಮುಸ್ಲಿಂ ಧರ್ಮದ ಕುರಿತು ಬೋಧನೆ ನೀಡುತ್ತಾ ಮತಾಂತರ ಮಾಡಿ ಆಕೆ ಮೇಲೆ ಅತ್ಯಾಚಾರವೆಸಗಿದ್ದ ಎಂದು ಹೇಳಲಾಗಿದೆ.

Advertisement

ಉಪಆಯುಕ್ತರ ಮನೆಯಲ್ಲಿದ್ದ ಸಂತ್ರಸ್ತೆ
ಯುವತಿ ಮೇಲೆ ಅತ್ಯಾಚಾರವೆಸಗಿದ ನಜೀರ್‌ ಖಾನ್‌ ದೊಮ್ಮಲೂರಿನ ಡೈಮಂಡ್‌ ಡಿಸ್ಟ್ರೀಕ್ಟ್‌ನಲ್ಲಿರುವ ಇರ್ಷಾದ್‌ ಖಾನ್‌ ಮನೆಯಲ್ಲಿ 15 ದಿನ  ಸಂತ್ರಸ್ಥ ಯುವತಿಯನ್ನು ಇರಿಸಿದ್ದ. ಅನಂತರ ಸೌದಿ ಅರಬ್‌ಗ ಕೆರೆದೊಯ್ದ ಆರೋಪಿ ಅಲ್ಲಿಯೂ ಆಕೆ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೆ, ಅಲ್ಲಿನ ಶ್ರೀಮಂತ ವ್ಯಕ್ತಿಗಳು ಕೂಡ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದರಿಂದ ಆತಂಕಗೊಂಡ ಸಂತ್ರಸ್ತೆ ಸೌದಿಯಿಂದ ಕೇರಳದ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಳು. ಯುವತಿಯ ಪೋಷಕರು ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಅಂತಾರಾಷ್ಟ್ರೀಯ ವಿಚಾರ ಹಾಗೂ ಲವ್‌ಜಿಹಾದ್‌ ಕುರಿತು ಪ್ರಕರಣವಾದರಿಂದ ಎನ್‌ಐಎ ಪ್ರಕರಣ ವರ್ಗಾಯಿಸಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ಸಂಪರ್ಕಿಸಿದ ಎನ್‌ಐಎ ಅಧಿಕಾರಿಗಳು ನಜೀರ್‌ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ಮಧ್ಯೆ ಆರೋಪಿ ನಜೀರ್‌ ಖಾನ್‌ ಸೌದಿಯಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆಯೇ ಬಂಧಿಸಿ, ಸಂತ್ರಸ್ತೆಯನ್ನು ರಕ್ಷಿಸಿದ್ದರು.

ಸಂತ್ರಸ್ತೆ ಹೇಳಿಕೆ ಆಧಾರದಲ್ಲಿ ದಾಳಿ
ಸಂತ್ರಸ್ತೆ ಹಾಗೂ ನಜೀರ್‌ ಖಾನ್‌ ವಿಚಾರಣೆ ಸಂದರ್ಭದಲ್ಲಿ ಸ್ಫೋಟಕ ಮಾಹಿತಿ ಸಿಕ್ಕಿದ್ದು, ಇಡೀ ಲವ್‌ ಜಿಹಾದ್‌ನ ಹಿಂದೆ ಉಪ ಆಯುಕ್ತ ಇರ್ಷಾದ್‌ ಖಾನ್‌ ಪತ್ನಿ ಕೈವಾಡ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅತ್ಯಾಚಾರಕ್ಕೊಳಗಾದ ಬಳಿಕ ಕೆಲ ದಿನಗಳ ಕಾಲ ಇರ್ಷಾದ್‌ ಖಾನ್‌ ಪತ್ನಿ ಜತೆ ಅವರ ಮನೆಯಲ್ಲೇ ನೆಲೆಸಿದ್ದೆ. ಅನಂತರ ನಜೀರ್‌ ಸೌದಿಗೆ ಕರೆದೊಯ್ದಿದ್ದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದರು. ಇನ್ನು ನಜೀರ್‌ ಖಾನ್‌ ಸಹ ಇರ್ಷಾದ್‌ ಖಾನ್‌ ಪತ್ನಿಯೇ ಪ್ರೇರಣೆ ನೀಡಿದ್ದು ಎಂದು ತಿಳಿಸಿದ್ದಾನೆ. ಈ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಖಾತೆಗಳು: ಇರ್ಷಾದ್‌ ಖಾನ್‌ ಪತ್ನಿ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದುಕೊಂಡಿದ್ದರು. ಈ ಮೂಲಕ ಹಿಂದೂ ಯುವತಿಯರನ್ನು ಪರಿಚಯಿಸಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಸದ್ಯ ಪತ್ತೆಯಾಗಿರುವ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗ‌ಳಲ್ಲಿ ಈ ಸಂಬಂಧ ಮಾಹಿತಿ ಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ.

ಯುವತಿ ನಮ್ಮ ಮನೆಯಲ್ಲಿ ಇರಲಿಲ್ಲ
ಎನ್‌ಐಎ ದಾಳಿ ಬಗ್ಗೆ ಹೇಳಿಕೆ ನೀಡಿರುವ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್‌ ಖಾನ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ ತ‌ಮ್ಮ ಮನೆಯಲ್ಲಿ ಯಾವ ಯುವತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪತ್ನಿ ಅಭಿಯಂತರಳಾಗಿದ್ದು, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾಳೆ. ನಾನು ಹಾಗೂ ಪತ್ನಿ ಬಿಟ್ಟರೆ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಜಾತಿ ಕುರಿತೆಲ್ಲ ಮಾತನಾಡುವುದಿಲ್ಲ. ಯುವತಿಯು ನಮ್ಮ ಮನೆಯಲ್ಲಿ 15 ದಿನ ಇದ್ದಳು ಎಂಬುದು ಶುದ್ಧ ಸುಳ್ಳು ಎಂದರು.

ತಮ್ಮ ಪತ್ನಿ ಯಾವುದೇ ರೀತಿಯಲ್ಲೂ ಸಮಾಜ ಸೇವೆ ಮಾಡಿಲ್ಲ. ಕೇರಳ ಮೂಲದ ಯುವತಿಯ ಸಂಪರ್ಕದಲ್ಲಿದ್ದರಿಂದ ಅನುಮಾನದಡಿ ತಮ್ಮ ಪತ್ನಿಯನ್ನೂ ಸಹ ವಿಚಾರಣೆ ಮಾಡಿದ್ದಾರೆ ಎಂದು ಇರ್ಷಾದ್‌ ಹೇಳಿದರು.
ರಾಷ್ಟ್ರೀಯ ತನಿಖಾದಳದವರು ಕೆಲ ದಿನಗಳ ಹಿಂದೆ ಬೆಂಗಳೂರಿನ ತಮ್ಮ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೊದಲು ನನ್ನ ಪತ್ನಿಗೆ ಯುವತಿಯ ಪರಿಚಯ ಗೊತ್ತಾಗಲಿಲ್ಲ. ಆದರೆ ಕಳೆದ ಎರಡು ತಿಂಗಳು ಹಿಂದೆ ಅದೇಗೋ ಪರಿಚಯವಾದ ಯುವತಿಯ ಗುರುತು ಪತ್ತೆ ಆಯಿತು. ಅಷ್ಟನ್ನು ಬಿಟ್ಟರೆ ಬೇರೆ ಏನೂ ಇಲ್ಲ. ನಜೀರಖಾನ್‌ ಯಾರು ಹಾಗೂ ಆತನಿಗೂ ಯುವತಿಗೂ ಏನು ಸಂಬಂಧ ಎಂಬುದು ಸಹ ನನ್ನ ಪತ್ನಿಗೆ ಗೊತ್ತಿಲ್ಲ. ಮನೆಯಲ್ಲಿ ನಾನು ಮತ್ತು ನನ್ನ ಪತ್ನಿ ಬಿಟ್ಟರೆ ಹೊರಗಿನವರಿಗೆ ಯಾರಿಗೂ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.

ಲವ್‌ ಜಿಹಾದ್‌ ಪ್ರಕರಣದಲ್ಲಿ ಪತ್ನಿ ಭಾಗಿಯಾಗಿಲ್ಲವಾದರೂ ಯುವತಿ ಪರಿಚಯ ಎಂಬ ಕಾರಣಕ್ಕಾಗಿ ವಿಚಾರಣೆ ಮಾಡಿದ್ದಾರೆ. ಲ್ಯಾಪ್‌ಟಾಪ್‌ಗ್ಳು ಮತ್ತು ಮೊಬೈಲ್‌ಗ‌ಳನ್ನು ತೆಗೆದುಕೊಂಡು ಹೋಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ತಮ್ಮದು ಮೂಲತ: ಶಿವಮೊಗ್ಗ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ, ಕಳೆದ ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ವರ್ಗಾವಣೆಗೊಂಡಿರುವೆ. ಎಲ್ಲ ಧರ್ಮಿಯರೊಂದಿಗೂ ಸೇರಿ ಕಾರ್ಯನಿರ್ವಹಿಸುತ್ತಿದ್ದೇನೆ. ತಮ್ಮ ಕುರಿತು ಯಾರೊಬ್ಬರಿಗೂ ಅನುಮಾನ ಇಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next