Advertisement

ಕಾರ್ಕಳದಲ್ಲಿ 100 ಬೆಡ್‌ ಸಿದ್ಧಗೊಳಿಸಲು ಡಿಸಿ ಸೂಚನೆ

11:02 PM May 21, 2020 | Sriram |

ಕಾರ್ಕಳ: ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗು ತ್ತಿರುವ ಕಾರಣ ತಾಲೂಕು ಕೇಂದ್ರ ಗಳಲ್ಲೇ ಚಿಕಿತ್ಸೆ ನೀಡಬೇಕಾಗಿದೆ. ಪ್ರತಿ ತಾಲೂಕಿನಲ್ಲೂ 100 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗಾಗಿ ಸಿದ್ಧಗೊಳಿಸ ಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಮೇ 21ರಂದು ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ವೈರಸ್‌ ತಗುಲಿ ಒಂದೇ ಒಂದು ಜೀವ ಹಾನಿಯಾಗಬಾರದು. ಈ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಸಕಲ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕಾಗಿ ಖಾಸಗಿ ವೈದ್ಯರ, ದಾದಿಯರ, “ಡಿ’ ಗ್ರೂಪ್‌ ನೌಕರರ ಸಹಕಾರ ಪಡೆಯಬೇಕು. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ತಾಲೂಕು ಆರೋಗ್ಯಾ ಧಿಕಾರಿ ಡಾ| ಕೃಷ್ಣಾನಂದ ಅವರಿಗೆ ತಿಳಿಸಿದ ಡಿಸಿ ಅದಕ್ಕಾಗಿ ವ್ಯಯವಾಗುವ ಖರ್ಚನ್ನು ಜಿಲ್ಲಾಡಳಿತ ಭರಿಸಲಿದೆ ಎಂದರು.

ಕೋವಿಡ್‌ ರೋಗಿಗಳಿಗೆ ಪೌಷ್ಠಿಕಯುಕ್ತ ಆಹಾರ ಒದಗಿಸಿ ಕೊಡುವಲ್ಲಿ ಯಾವೊಂದೂ ಲೋಪವಾಗಬಾರದು ಎಂದು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಕಳ ಮಾದರಿ
ಕೋವಿಡ್‌ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಕಳ ತಾಲೂಕು ಮಾದರಿ ಎಂಬ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಯವರು, ಶಾಸಕರ ನೇತೃತ್ವದಲ್ಲಿ ಇಲ್ಲಿನ ಅಧಿಕಾರಿಗಳು, ಸಿಬಂದಿ, ಸ್ವಯಂ ಸೇವಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ಬಳಿಕ ಡಿಸಿಯವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಡಾ| ಪ್ರಕಾಶ್‌ ಕೆಲವೊಂದು ಸಲಹೆ ನೀಡಿದರು. ತಹಶೀಲ್ದಾರ್‌ ಪುರಂದರ ಹೆಗ್ಡೆ, ಮಹೇಶ್ಚಂದ್ರ, ಡಿವೈಎಸ್‌ಪಿ ಭರತ್‌ ರೆಡ್ಡಿ, ಬಿಇಒ ಶಶಿಧರ್‌ ಜಿ.ಎಸ್‌. ಉಪಸ್ಥಿತರಿದ್ದರು. ತಾ.ಪಂ. ಇಒ ಡಾ| ಮೇ| ಹರ್ಷ ಕೆ.ಬಿ. ಸ್ವಾಗತಿಸಿ, ಸಭೆ ನಿರ್ವಹಿಸಿದರು.

Advertisement

ಸವಾಲಾಗಿ ಸ್ವೀಕರಿಸಿ
ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಕೋವಿಡ್‌ ವೈರಸ್‌ ಕುರಿತು ಯಾರೊಬ್ಬರೂ ಧೈರ್ಯಗೆಡಬಾರದು. ನಾವು ಇದನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next