Advertisement

ಗಂಟಲು ದ್ರವ ಕೇಂದ್ರ ಹೆಚ್ಚಿಸಲು ಡಿಸಿ ಸೂಚನೆ

11:01 AM Jun 12, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಸದ್ಯ 17 ಮೂಗು ಮತ್ತು ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳಿದ್ದು, ಅವುಗಳನ್ನು 55 ಕ್ಕೆ ಹೆಚ್ಚಿಸಬೇಕು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಕೋವಿಡ್‌-19 ರ ತಪಾಸಣೆಗೊಳಪಡಿಸಲು ಜಿಲ್ಲೆಯಾದ್ಯಂತ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಣೆ ಕೇಂದ್ರಗಳನ್ನು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪಿಸುವಂತೆ ಸೂಚನೆ ನೀಡಿದರು.

ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು ಮತ್ತು ಫಾರ್ಮಸಿಗಳಲ್ಲಿ ಕ್ರಮವಾಗಿ ಚಿಕಿತ್ಸೆಗೆ ಬರುವ ಮತ್ತು ಔಷಧ ಖರೀದಿಸುವವರಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಕೋವಿಡ್‌ ತಪಾಸಣೆಗೊಳಪಡಿಸುವುದು ಅಗತ್ಯವಾಗಿದೆ. ಎಲ್ಲ ನಗರ ಮತ್ತು ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಬೇಕು. ಆಸ್ಪತ್ರೆ, ಔಷಧ ಅಂಗಡಿ ಹಾಗೂ ಆರೋಗ್ಯ ಸೇತು , ಮೊಬೈಲ್‌ ಆ್ಯಪ್‌ ಮೂಲಕ ಸೋಂಕಿನ ಲಕ್ಷಣವಿರುವವರನ್ನು ಗುರುತಿಸಿ ತಪಾಸಣೆಗೆ ಬರಲು ಸೂಚಿಸಬೇಕು. ಅಂತಹ ವ್ಯಕ್ತಿಗಳು ತಪಾಸಣೆಗೆ ಬರದಿದ್ದರೆ, ಸ್ಥಳೀಯ ಆರೋಗ್ಯ ಇಲಾಖೆ, ಅಂಗನವಾಡಿ ಆಶಾ ಕಾರ್ಯಕರ್ತೆಯರ ಮೂಲಕ ಖುದ್ದು ಪರಿಶೀಲನೆ ಮಾಡಿಸಬೇಕೆಂದು ಸೂಚಿಸಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಉಪ ಆಯುಕ್ತ ಅಜೀಜ್‌ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸುಜಾತಾ ಹಸವೀಮಠ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಎಸ್‌.ಎಂ. ಹೊನಕೇರಿ, ಡಾ|ಶಶಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next