Advertisement

ನೀತಿ ಸಂಹಿತೆ ಪಾಲಿಸಲು ಡಿಸಿ ಸೂಚನೆ

11:45 AM Sep 23, 2019 | Suhan S |

ಬೆಳಗಾವಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ  ಡಾ| ಎಸ್‌.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

Advertisement

ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಯಾವುದೇ ರೀತಿಯ ಹೊಸ ಕಾಮಗಾರಿಗಳನ್ನು ಆರಂಭಿಸಬಾರದು. ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಬಾರದು. ಒಂದು ವೇಳೆ ಈಗಾಗಲೇ ಕಾಮಗಾರಿ ಆರಂಭಿಸಿದ್ದರೆ ಕೆಲಸ ಮುಂದುವರಿಸಲು ಯಾವುದೇ ತೊಂದರೆಯಿಲ್ಲ ಎಂದರು.

ಇಲಾಖಾವಾರು ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಗೆ ಸಾಕಷ್ಟು ಸಮಯ ಇರುವುದರಿಂದ ಮಾದರಿ ನೀತಿ ಸಂಹಿತೆ ವೇಳೆ ಹೊಸದಾಗಿ ಯಾವುದೇ ಕಾಮಗಾರಿ ಆರಂಭಿಸಬಾರದು. ಅನಗತ್ಯವಾಗಿ ಸಚಿವರು ಅಥವಾ ಜನಪ್ರತಿನಿಧಿಗಳ ಭೇಟಿ ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರೀತಿಯಲ್ಲಿ ಯಾವುದೇ ರೀತಿಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದರು.

ರಜೆ ನೀಡದಂತೆ ಸೂಚನೆ: ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಅಧಿಕಾರಿಗಳು ಅಥವಾ ಕೆಳಹಂತದ ಸಿಬ್ಬಂದಿಗೆ ರಜೆ ನೀಡಬಾರದು. ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ಹೊರಗಡೆ ತೆರಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದ್ದು, ಏಕಗವಾಕ್ಷಿ ಪದ್ಧತಿಯಲ್ಲಿ ಸಂಘಟಕರಿಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿ ನಡೆಯುವ ಸಭೆ-ಸಮಾರಂಭಗಳಿಗೆ ಪಾಲಿಕೆ ಆಯುಕ್ತರು ಪರವಾನಗಿ ನೀಡುವರು. ಅದೇ ರೀತಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಸಭೆ-ಸಮಾರಂಭ ಮತ್ತು ಮೆರವಣಿಗೆಗೆ ಪರವಾನಿಗೆ ನೀಡಲಿದ್ದಾರೆ. ಪರವಾನಿಗೆ ಹೊಂದಿರುವ ಆಯುಧಗಳನ್ನು ಕೂಡಲೇ ಸಂಬಂ ಧಿಸಿದ ಪೊಲೀಸ್‌ ಠಾಣೆಯಲ್ಲಿ ನಿಯಮಾವಳಿ ಅನ್ವಯ ಜಮಾ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಚುನಾವಣಾ ಕರ್ತವ್ಯ ಕಡ್ಡಾಯ:  ಚುನಾವಣೆಗೆ ನಿಯೋಜಿಸಲಾಗುವ ಅಧಿ ಕಾರಿಗಳು ಹಾಗೂ ಸಿಬ್ಬಂದಿ ತಮಗೆ ನೀಡಲಾಗುವ ಕೆಲಸವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಅಂಗವಿಕಲರು, ಗರ್ಭಿಣಿಯರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಮನವಿ ಪರಿಶೀಲಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ ಕಟ್ಟಡಗಳ ಪರಿಶೀಲನೆಗೆ ಸೂಚನೆ:  ಕಳೆದ ಬಾರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದ ಶಾಲಾ ಕಟ್ಟಡಗಳನ್ನು ಕೂಡಲೇ ಪರಿಶೀಲಿಸಿ ವರದಿಯನ್ನು ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವೇಳೆ ಯಾವುದಾದರೂ ಕಟ್ಟಡಗಳು ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿಗೊಳಿಸಬೇಕು. ಒಂದು ವೇಳೆ ಕಟ್ಟಡಗಳು ಸಂಪೂರ್ಣ ಕುಸಿದಿದ್ದರೆ ಪರ್ಯಾಯ ಮತಗಟ್ಟೆಗಳನ್ನು ಗುರುತಿಸಲಾಗುವುದು ಎಂದರು.

ಡಿಸಿಪಿ ಸೀಮಾ ಲಾಟ್ಕರ್‌, ಅಪರ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next