ಹಾಸನ: ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಸಮಗ್ರ ಕೃಷಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಸಮಗ್ರ ಕೃಷಿ ಅಭಿಯಾನ ಯೋಜನೆ ಅನುಷ್ಠಾನದ ಕುರಿತು ವಿಶೇಷ ಸಭೆ ನಡೆಸಿದ ಅವರು, ರೈತರ ಹಿತ ಕಾಯುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೃಷಿ ವಿಮಾ ಯೋಜನೆ ಮಾಹಿತಿ ನೀಡಿ: ಫಸಲ್ ಬಿಮಾ ಯೋಜನೆ ಸ್ವರೂಪ, ವಿಮೆಗೆ ನಿಗದಿಪಡಿಸಲಾಗಿರುವ ಬೆಳೆಗಳು, ಕಂತು ಪಾವತಿ ದಿನಾಂಕ, ಕ್ಲೈಮ್‌ಗಳು ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಪಂಚಾಯಿತಿಗಳು ಹಾಗೂ ಸುದ್ದಿ ಮಾಧ್ಯಮಗಳ ಮೂಲಕ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ ಅವರು, ವಿವಿಧ ಬಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಪ್ರಸಕ್ತ ಹಂಗಾಮಿಗಾಗಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಬೇಕು ಎಂದು ಹೇಳಿದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಿವಿಧ ಬಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ,ಖಾತೆ ಪುಸ್ತಕ, ಪಾಸ್ ಪುಸ್ತಕ , ಕಂದಾಯ ರಶೀದಿಯನ್ನು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಮಾಹಿತಿ ನೀಡಿದರು.
ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಅಧಿಸೂಚಿತ ಬಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ. 50ಕ್ಕಿಂತ ಹೆಚ್ಚಿನ ಬೆಳೆ ನಷ್ಟ ಸಂಭಸಿದಲ್ಲಿ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಿದ ಬೆಳೆ ಬಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಮುಂಚಿತವಾಗಿ ಬಿಮಾ ಸಂಸ್ಥೆಯು ನಿಯ ಮಾನುಸಾರ ನೀಡ ತಕ್ಕದ್ದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾತಿ ಬಂದ ನಂತರ ಅಂತಿಮ ಬೆಳೆ ಬಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ನಿಯ ಮಾನುಸಾರ ಹೊಂದಾಣಿಕೆ ಮಾಡಬೇಕಿದೆ ಎಂದು ಅವರು ಹೇಳಿದರು.
ಸಮಗ್ರ ಕೃಷಿ ಅಭಿಯಾನದ ಮಾಹಿತಿ: ಸಮಗ್ರ ಕೃಷಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಅವರು ಸಮಗ್ರ ಕೃಷಿ ಮಾಹಿತಿ ಘಟಕ, ಕೃಷಿ ವಸ್ತು ಪ್ರದರ್ಶನ, ರೈತ ಸಂವಾದ ಎಂಬ ಮೂರು ಘಟಕಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿ ನೀಡಿದರು.
ಕಾರ್ಯಕ್ರಮದ ಅನುಷ್ಠಾನ: ಸಮಗ್ರ ಕೃಷಿ ಅಭಿಯಾನವನ್ನು ಏಪ್ರಿಲ್ನಿಂದ ಜೂನ್ ಮಾಹೆ ಯಲ್ಲಿ ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸ ಬೇಕಿದೆ. ಸಮಗ್ರ ಕೃಷಿ ಅಭಿಯಾನ ಕಾರ್ಯ ಕ್ರಮವನ್ನು ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಯೋಜನ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.