Advertisement

ಡೀಸಿಯಿಂದ ದಿಢೀರ್‌ ತಾಲೂಕು ಕಚೇರಿ ಪರಿಶೀಲನೆ

09:46 PM Feb 06, 2020 | Team Udayavani |

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ನಗರದ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಕಚೇರಿ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ದೂರಿದಾಗ, ಡೀಸಿಯವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ಜಿಲ್ಲಾಧಿಕಾರಿಯವರು ತಾಲೂಕು ಕಚೇರಿಗೆ ಆಗಮಿಸುತ್ತಿದಂತೆ ಕಚೇರಿಯ ಮುಂದೆ ನಿಂತಿರುವ ಸಾರ್ವಜನಿಕರನ್ನು ನೋಡಿ, ನೇರ ಅವರತ್ತ ಧಾವಿಸಿ ನಿಮ್ಮ ಸಮಸ್ಯೆಗಳೇನು ಎಂದು ಕೇಳಿದರು. ತಹಶೀಲ್ದಾರ್‌ ಅವರಿಗಾಗಿ ಕಾಯುತ್ತಿದ್ದೇವೆ ಎಂದು ಸಮಸ್ಯೆ ಹೇಳಲು ಪ್ರಾರಂಭಿಸಿದ ಸಾರ್ವಜನಿಕರು ತಾಲೂಕು ಅಧಿಕಾರಿಗಳ ವಿರುದ್ಧ ದೂರುಗಳನ್ನು ಹೇಳಿದರು.

ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದ ಡೀಸಿ: ನಂತರ ಪ್ರತಿ ಕೊಠಡಿಗಳಿಗೂ ತೆರಳಿದ ಜಿಲ್ಲಾಧಿಕಾರಿಯವರು, ಹಾಜರಾತಿ ನೋಡಿ ಬಂದಿಲ್ಲದ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದರು. ಡೀಸಿಯವರು ಬಂದ ನಂತರ ಕಚೇರಿಗೆ ಆಗಮಿಸಿದ ತಹಶೀಲ್ದಾರ್‌ ಮಹೇಶ್‌ ಅವರನ್ನು ಏಕೆ ಇಷ್ಟೊಂದು ಸಾರ್ವಜನಿಕರು ತಾಲೂಕು ಕಚೇರಿ ಸುತ್ತುತ್ತಿದ್ದಾರೆ ಎಂದು ಪ್ರಶ್ನಿಸಿದರು. ಒಂದು ವರ್ಷವಾದರೂ ಸಹ ಅವರ ಕೆಲಸಗಳು ಆಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ಕಡತಗಳ ಸಂಪೂರ್ಣ ಮಾಹಿತಿ ನೀಡಲು ತಾಕೀತು: ಪ್ರತಿ ಕೊಠಡಿಗೂ ತೆರಳಿದ ಅವರು ಕಡತಗಳ ಪರಿಶೀಲನೆ ನಡೆಸಿದ ವೇಳೆ ಹಲವು ಪ್ರಕರಣಗಳು ವರ್ಷವಾದರೂ ತಾಲೂಕು ಕಚೇರಿಯಲ್ಲೇ ಇರುವುದನ್ನು ಗಮನಿಸಿ,ಯಾರ ಯಾರ ಬಳಿ ಕಡತಗಳು ಉಳಿದಿವೆ ಎನ್ನುವುದರ ಬಗ್ಗೆ ಸಂಜೆಯೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಇನ್ನೂ ಕೆಲವು ಕೊಠಡಿಗಳಲ್ಲಿ ದಾಖಲಾತಿಗಳು ಗೋದಾಮಿನಲ್ಲಿ ತುಂಬಿರುವುದನ್ನು ಗಮನಿಸಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ದಾಖಲೆಗಳು ವ್ಯತ್ಯಾಸವಾದರೆ ಇದಕ್ಕೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಾರ್ವಜನಿಕರಿಗೆ ಸೌಲಭ್ಯವಿಲ್ಲ: ದಿನ ನಿತ್ಯ ತಮ್ಮ ದೈನಂದಿನ ಕೆಲಸಗಳಿಗೆ ತಹಶೀಲ್ದಾರ್‌ ಕಚೇರಿ ಹಾಗೂ ಆಹಾರ ಇಲಾಖೆ ಶಾಖೆಗೆ ನೂರಾರು ಸಾರ್ವಜನಿಕರು ಹಾಗೂ ಮಹಿಳೆಯರು, ಪುರುಷರು ಆಗಮಿಸಿದ ಹಿನ್ನೆಲೆಯಲ್ಲಿ ಸೂಕ್ತ ಶೌಚಾಲಯ ಇಲ್ಲದೇ ಸಾರ್ವಜನಿಕರು ಪರದಾಟ ಪಡುತ್ತಿದ್ದಾರೆ. ಇದರ ಜೊತೆಗೆ ಸೂಕ್ತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ಯಾಪ್ಯ ವೇತನ, ವಿಧವಾ ವೇತನ ಇನ್ನಿತರ ಮೂಲಭೂತ ಸೌಕರ್ಯಗಳ ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದರೆ ಇಲ್ಲಿನ ಕೆಲವು ಸಿಬ್ಬಂದಿ ನಾಳೆ ಬಾ, ನಾಳಿದ್ದು ಬಾ ಎಂದು ಕಳೆದ ಆರು ತಿಂಗಳಿಂದ ಉತ್ತರ ನೀಡುತ್ತಿದ್ದಾರೆ. ದಲ್ಲಾಳಿಗಳ ಮುಖಾಂತರ ಭೇಟಿ ನೀಡಿದರೆ ಕೆಲವು ಎರಡು ದಿನಗಳಲ್ಲಿ ಕೆಲಸ ಆಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದರು.

ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಿ: ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ರವಿ ಅವರು, ಸಾರ್ವಜನಿಕರು ತಮ್ಮ ಕಚೇರಿಯ ಬಗ್ಗೆ ಹಲವಾರು ದೂರು ಹೇಳಿದ್ದಾರೆ. ಈಗ ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ. ಸಾರ್ವಜನಿಕರನ್ನು ಕಚೇರಿಗೆ ಅಲೆಸಬೇಡಿ. ಶೀಘ್ರ ಅವರ ಕೆಲಸಗಳನ್ನು ಮಾಡಿಕೊಡಿ. ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸಿ ಎಂದು ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next