Advertisement

ರಸ್ತೆ ಅಪಘಾತ ಮಾಹಿತಿ ನೀಡಲು ಸೂಚನೆ

08:55 PM Feb 05, 2021 | Team Udayavani |

ಕಾರವಾರ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಜಿಲ್ಲೆಯಲ್ಲಿ ನಡೆಯುವ ರಸ್ತೆ ಅಪಘಾತ, ದಾಖಲಾದ ಪ್ರಕರಣ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತ ದಾಖಲೆಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಮೀತಿ ಅಧ್ಯಕ್ಷ ಡಾ| ಕೆ. ಹರೀಶಕುಮಾರ್‌ ಸೂಚಿಸಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಲವು ಮಾರ್ಗದರ್ಶನ ನೀಡಿದರು. ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿ ಹಾಗೂ ವಿಳಂಬ ಧೋರಣೆ ಬಗೆಗೆ ದೂರುಗಳು ಕೇಳಿ ಬರುತ್ತಿವೆ. ಅಲ್ಲದೇ ಜಿಲ್ಲೆಯ ಕೆಲವೆಡೆ ಅಪಘಾತದಂತಹ ದುರ್ಘ‌ಟನೆಗಳು ಮರುಕಳಿಸುತ್ತಿದ್ದು, ಜನಸಾಮಾನ್ಯರ ಕಣ್ಣಿಗೆ ಕರ್ತವ್ಯ ನಿರತ ಪೊಲೀಸರು ಗುರಿಯಾಗುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಪಘಾತ ತಡೆ ಹಾಗೂ ಕಾರಣ ಹುಡುಕುವಲ್ಲಿ ನಿರಾಸಕ್ತಿ ತೋರಿಸದೇ ಕಾರ್ಯ ನಿರ್ವಹಿಸಬೇಕು. ಜೊತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ನೀಡಬೇಕು ಎಂದರು.

ಎಸ್ಪಿ ಶಿವಪ್ರಕಾಶ್‌ ದೇವರಾಜು ಮಾತನಾಡಿ, ಧಾರವಾಡ, ಕಲಬುರಗಿ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆ ಹಾಗೂ ಜಿಲ್ಲೆಯಲ್ಲಿ ನಡೆದ ಕೇಂದ್ರ ಸಚಿವರ ಕಾರು ಅಪಘಾತದಂತಹ ಭೀಕರ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚಿಸಿ ಕೈಗೊಂಡ ಅಂಶಗಳನ್ನು ನಿಗದಿತ ಸಮಯದೊಳಗೆ ಕಾರ್ಯರೂಪಕ್ಕೆ ತರಬೇಕಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಪೊಲೀಸ್‌ ವರದಿ ಪ್ರಕಾರ ಜಿಲ್ಲೆಯಲ್ಲಿ ಪದೇಪದೇ ಅಪಘಾತಗಳಾಗುವ ಕಿರವತ್ತಿ, ಅರೆಬೈಲ್‌ ಘಾಟ್‌, ಗೇರುಸೊಪ್ಪಾ, ದೇವಿಮನೆ ಘಾಟ್‌, ಹೊನ್ನಾವರ-ಕುಮಟಾ ಹಾಗೂ ಅಂಕೋಲಾ ರಸ್ತೆಗಳಂತಹ 37 ಬ್ಲಾಕ್‌ ಸ್ಪಾಟ್‌ಗಳಿವೆ. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅಪಘಾತವಾಗಲು ಕಾರಣ ಹಾಗೂ ತಡೆಯುವ ಕ್ರಮಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಈ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಬಗ್ಗೆ ಪೊಲೀಸ್‌ ಇಲಾಖೆಗೆ ದಾಖಲೆಗಳನ್ನೊಳಗೊಂಡ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು. ನಂತರ ಕಮಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ,  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕನಿಷ್ಠ ತಿಂಗಳಿಗೆ 5 ಬ್ಲಾಕ್‌ ಸ್ಪಾಟ್‌ಗಳನ್ನಾದರೂ ಸರಿಪಡಿಸಲು ಪ್ರಯತ್ನಿಸಬೇಕು ಎಂದರು. ನಗರ ಪ್ರದೇಶದಲ್ಲಿ ಮದ್ಯಪಾನ ಚಾಲನೆ, ಹೆಲ್ಮೆಟ್‌, ಸೀಟ್‌ಬೆಲ್ಟ್ ಧರಿಸದಿರುವಂತಹ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಆದರೆ ಭಾರಿ ವಾಹನಗಳ ಪ್ರಕರಣಗಳು ದಾಖಲಾಗುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಂಚಾರಿ ನಿಯಮ ಪಾಲಿಸದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ :ರ್ಯಾವಣಿಕಿ ಗ್ರಾಮದಲ್ಲಿ ಚಿಕೂನ್‌ ಗೂನ್ಯಾ ಭೀತಿ

Advertisement

ಜಿಲ್ಲಾ ಮಟ್ಟದ ಪ್ರಾದೇಶಿಕ ಸಾರಿಗೆ,ಹೊನ್ನಾವರ, ದಾಂಡೇಲಿ ಸಹಾಯಕ ಪ್ರಾದೇಶಿಕ ಸಾರಿಗೆ, ಜಿಲ್ಲಾ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ, ಲೋಕೊಪಯೋಗಿ ಇಲಾಖೆ, ಐಆರ್‌ಬಿ ಅಧಿಕಾರಿಗಳು ಹಾಗೂ ಕಾರವಾರ ತಹಶೀಲ್ದಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next