ಕಾರವಾರ: ಜಿಲ್ಲೆಯಲ್ಲಿರುವ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ಒಂದು ತಿಂಗಳೊಳಗೆ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಜ.27 ರಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. 2011ರ ಜನಗಣತಿ ಕುಟುಂಬಗಳಿಗೆ ಹೋಲಿಕೆ ಮಾಡಿದಾಗ ವಿತರಿಸಲಾಗಿರುವ ಪಡಿತರ ಚೀಟಿಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ನಿಗದಿಪಡಿಸುವ ಮಾನದಂಡಗಳಿಗೆ ವಿರುದ್ಧವಾಗಿ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಪಡೆದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಅಂತಹ ಅನರ್ಹ ಪಡಿತರ ಚೀಟಿಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ತಿಳಿಸಿದ್ದಾರೆ.
ಕಂದಾಯ, ವಾಣಿಜ್ಯ ತೆರಿಗೆ, ಖಜಾನೆ, ಆದಾಯ ತೆರಿಗೆ ಮತ್ತು ವೃತ್ತಿ ತೆರಿಗೆ, ಸಾರಿಗೆ ಇಲಾಖೆಗಳಿಂದ, ನಿಗಮ ಮಂಡಳಿ, ಕಾರ್ಖಾನೆಗಳು, ನಗರಾಭಿವೃದ್ಧಿ ಮಂಡಳಿಗಳು, ಪ್ರಾಧಿಕಾರಗಳು ಹಾಗೂ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳು, ಜಿಎಸ್‌ಟಿ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಮಿತಿಗಳಿಂದ ವಿವರಗಳನ್ನು ಪಡೆದು ದತ್ತಾಂಶ ತುಲನೆ ಮಾಡಿ ಅನರ್ಹರನ್ನು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಬೇಕು. ಪಡಿತರ ಚೀಟಿಗಾಗಿ ಜಂಟಿ ಕುಟುಂಬಗಳನ್ನು ಕೃತಕವಾಗಿ ವಿಭಜಿಸಿಕೊಂಡಿರುವುದನ್ನು ಪತ್ತೆಮಾಡಿ ವಿಲೀನಗೊಳಿಸಬೇಕು. ಮೃತರು, ಕುಟುಂಬದಿಂದ ಹೊರ ಹೋದವರ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆದು ಹಾಕಬೇಕು.
ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಪಡೆದಿರುವ ಸರ್ಕಾರಿ ನೌಕರರು, ಅನರ್ಹ ನೌಕರರು, ನಿವೃತ್ತ ನೌಕರರ ಪಡಿತರ ಚೀಟಿಗಳನ್ನು ರದ್ದುಪಡಿಸಿ ಕಾನೂನು ಕ್ರಮಕೈಗೊಳ್ಳಬೇಕು. ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯಡಿ ಗ್ರಾಮೀಣ ಪ್ರದೇಶದಲ್ಲಿ ಶೇ. 76.04 ಹಾಗೂ ಪಟ್ಟಣ ಪ್ರದೇಶಕ್ಕೆ ಶೇ. 49.36 ಫಲಾನುಭವಿಗಳಿಗೆ ಪಡಿತರ ಹಂಚಿಕೆ ನೀಡಲಾಗುತ್ತಿದ್ದು, ಆದ್ಯತಾ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆಯನ್ನು ರಾಷ್ಟಿÅàಯ ಹಂಚಿಕೆ ಮಿತಿಯೊಳಗೆ ತರಬೇಕಿದೆ. ಈ ಕಾರ್ಯಕ್ಕಾಗಿ ಪ್ರತಿಯೊಬ್ಬ ಅಧಿಕಾರಿಗೆ ಗುರಿ ನಿಗದಿಪಡಿಸಬೇಕು ಎಂದರು.
ಇದನ್ನೂ ಓದಿ :ಉಳವಿ ರಥಬೀದಿ ನಿರ್ಮಾಣಕ್ಕೆ 4 ಕೋಟಿ ಬಿಡುಗಡೆ: ಆರ್.ವಿ.ದೇಶಪಾಂಡೆ
ತಹಶೀಲ್ದಾರ್, ಉಪವಿಭಾಗಾಧಿಕಾರಿ ಸಹಯೋಗ ದೊಂದಿಗೆ ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಬೇಕು. ಜೊತೆಗೆ ದೈನಂದಿನ, ಮಾಸಿಕ ಪ್ರಗತಿ ವರದಿಯನ್ನು 2021ರ ಫೆ. 1 ರಿಂದ ಪ್ರತಿದಿನ ನಮೂನೆ 8 ಮತ್ತು ನಮೂನೆ-8ಎ ರಲ್ಲಿ ಗೂಗಲ್ ಶೀಟ್‌ನಲ್ಲಿ ಕಟ್ಟುನಿಟ್ಟಾಗಿ ಅಪ್‌ಲೋಡ್ ಮಾಡಬೇಕು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.