ಕಾರವಾರ : ಗ್ರಾಮೀಣ ಜನರ ಅಹವಾಲು ಹಾಗೂ ಬೇಡಿಕೆಗಳ ಕುರಿತಂತೆ ಸ್ಥಳದಲ್ಲಿಯೇ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಇದೇ ಫೆಬ್ರುವರಿ 20 ರ ಮೂರನೇ ಶನಿವಾರ ಕಂದಾಯ ಅಧಿಕಾರಿಗಳು ಹಾಗೂ ಇತರ ಇಲಾಖಾ ಅಧಿಕಾರಿಗಳ ಗ್ರಾಮ ವಾಸ್ತವ್ಯ ಆರಂಭಗೊಳ್ಳಲಿದೆ. ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಕಂದಾಯ ಸಚಿವರ ನಿರ್ದೇಶನದಂತೆ “ಹಳ್ಳಿಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ” ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕುರಿತಂತೆ ಜಿಲ್ಲಾಧಿಕಾರಿ ಸೂಚನೆ ಹೊರಡಿಸಿದ್ದು, ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಗ್ರಾಮ ವಾಸ್ತವ್ಯ ಕೈಗೊಂಡು ಸಾರ್ವಜನಿಕರ ಅಹವಾಲು ಮತ್ತು ಬೇಡಿಕೆಗಳನ್ನು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ಬಾಲ್ಕನಿಂದ ಕೆಳಗೆ ಬಿದ್ದು ಮೃತಪಟ್ಟ ಹಸುಗೂಸು: ಅಂಗಾಂಗ ದಾನಮಾಡಿ 5 ಜೀವ ಉಳಿಸಿದ ಧನಿಷ್ಥಾ
ಇದೇ ದಿನ ಫೆಬ್ರುವರಿ 20 ರಂದು ಶನಿವಾರ ಆಯಾ ತಾಲೂಕಾ ತಹಶೀಲ್ದಾರಗಳ ನೇತೃತ್ವದಲ್ಲಿ ಕೂಡ ಗ್ರಾಮ ವಾಸ್ತವ್ಯ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದು, ಕಾರವಾರ ತಾಲೂಕಿನ ಬಾಡ ಹೋಬಳಿಯ ಗುಡ್ಡಳಿ ಗ್ರಾಮ, ಹೊನ್ನಾವರ ತಾಲೂಕಿನ ಸಾಲಕೊಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಳಸಾಣಿ ಗ್ರಾಮ, ಜೋಯಿಡಾ ತಾಲೂಕು ಅಸು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊನಕೇಶ ಗ್ರಾಮ, ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಗೋಡ, ಅಂಕೋಲಾ ತಾಲೂಕಿನ ಸುಂಕನಾಳ ಗ್ರಾ ಪಂ ವ್ಯಾಪ್ತಿಯ ವಜ್ರಳ್ಳಿ, , ಮುಂಡಗೋಡ ತಾಲೂಕಿನ ಕ್ಯಾದಗಿಕೊಪ್ಪ, ಯಲ್ಲಾಪುರ ತಾಲೂಕಿನ ಬಿಸಗೋಡ, ಕುಮಟಾ ತಾಲೂಕಿನ ಗೋಕರ್ಣ, ಹಳಿಯಾಳ ತಾಲೂಕಿನ ಸಾಂಬ್ರಾಣಿ, ಶಿರಸಿ ತಾಲೂಕಿನ ಕೊಳಗಿಬೀಸ ಗ್ರಾಮಗಳಲ್ಲಿ ವಾಸ್ತವ್ಯ ನಡೆಸಲು ಸ್ಥಳ ನಿಗದಿ ಮಾಡಿದ್ದು, ತಾಲೂಕು ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಗ್ರಾಮದ ಸಾರ್ವಜನಿಕರಿಂದ ಅಹವಾಲು ಹಾಗೂ ಬೇಡಿಕೆ ಸ್ವೀಕರಿಸಿ ಸೂಕ್ತ ಪರಿಹಾರಕ್ಕೆ ಕ್ರಮವಹಿಸಲು ಆಯಾ ತಾಲೂಕಿನ ತಹಶೀಲ್ದಾರಗಳಿಗೆ ಸೂಚನೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.