Advertisement

ಸರ್ಕಾರಿ ಗಣಪನ ವಿಸರ್ಜನೆಯೇ ಅಂತಿಮ

04:06 PM Sep 01, 2018 | |

ಬೆಳಗಾವಿ: ಪ್ರತಿ ವರ್ಷ ಗಣೇಶೋತ್ಸವದಲ್ಲಿ ಕೊನೆಯ ಗಣಪತಿ ವಿಸರ್ಜನೆಗಾಗಿ ನಡೆಯುವ ಗೊಂದಲ ಹಾಗೂ ಗಲಾಟೆಗೆ ಇತಿಶ್ರೀ ಹೇಳುವ ಉದ್ದೇಶದಿಂದ ಈ ಬಾರಿ ಮಹಾನಗರ ಪಾಲಿಕೆಯ ಗೌರ್ನಮೆಂಟ್‌ ಗಣಪನ ವಿಸರ್ಜನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿಲ್ಲಾವುಲ್ಲಾ ಎಸ್‌. ಪ್ರಕಟಿಸಿದರು. ನಗರದ ಆರ್‌ಟಿಒ ಕಚೇರಿ ಬಳಿಯ ಪೊಲೀಸ್‌ ಜಿಮಖಾನಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಬೇರೆ ಬೇರೆ ಗಲ್ಲಿಗಳ ಗಣಪತಿ ವಿಸರ್ಜನೆ ಆಗುವಾಗ ನಮ್ಮದೇ ಕೊನೆಯ ಗಣಪತಿ ವಿಷರ್ಜನೆ ಎಂದು ಕೆಲವು ಕಡೆ ಗಲಾಟೆಗಳು ಆಗುತ್ತಿವೆ. ಹೀಗಾಗಿ ಜಿಲ್ಲಾಡಳಿತವೇ ಈ ಬಾರಿ ಪಾಲಿಕೆಯ ಗಣಪನನ್ನು ವಿಸರ್ಜನೆ ಮಾಡಲಿದೆ. ಇದರಲ್ಲಿ ಎಲ್ಲ ಅಧಿಕಾರಿಗಳು ಹಾಜರಾಗಿ ಗಣಪನಿಗೆ ನಮನ ಸಲ್ಲಿಸುವ ಮೂಲಕ ಹಬ್ಬ ಆಚರಿಸಲಿವೆ ಎಂದು ಹೇಳಿದರು.

Advertisement

ಬೆಳಗಾವಿಯಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಇಲ್ಲಿ ನೆರೆಯ ರಾಜ್ಯ ಸೇರಿದಂತೆ ಇತರೆ ಜಿಲ್ಲೆಗಳ ಜನರೂ ಆಗಮಿಸುತ್ತಾರೆ. ಹೀಗಾಗಿ ಯಾವುದೇ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಈ ಸಲ 378 ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಯಾಗಲಿದ್ದು, ಮಂಡಳದವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ನಗರದಲ್ಲಿ ಏಕಗವಾಕ್ಷಿ ಕೇಂದ್ರದ ವ್ಯವಸ್ಥೆ ಮಾಡಲಾಗುವುದು ಎಂದರು.

ಮಹಾನಗರ ಪೊಲೀಸ್‌ ಆಯುಕ್ತ ಡಾ| ಡಿ.ಸಿ. ರಾಜಪ್ಪ ಮಾತನಾಡಿ, ಕಳೆದ ಬಾರಿ 357 ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಯಾಗಿದ್ದವು. ಆದರೆ ಈ ಸಲ 378 ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ಅಧಿಕೃತ ಮಾಹಿತಿ ಬಂದಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

ಏಕಗವಾಕ್ಷಿ ಕೇಂದ್ರ: ಗಣಪತಿ ಮಂಡಳಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಸೆ. 1ರಂದು ಏಕಗವಾಕ್ಷಿ ಕೇಂದ್ರದ ವ್ಯವಸ್ಥೆ ಮಾಡಲಾಗುವುದು. ಜತೆಗೆ ಆಯಾ ಪ್ರದೇಶಗಳಲ್ಲಿ ಎಲ್ಲರಿಗೂ ಅನುಕೂಲ ಕಲ್ಪಿಸಲು ಪೊಲೀಸ್‌ ಕಂಟ್ರೋಲ್‌ ರೂಂ.ನ ವಾಟ್ಸ್‌ ಆ್ಯಪ್‌ ನಂಬರ್‌ ನೀಡಲಾಗುವುದು. ಬೀಟ್‌ ಸದಸ್ಯರ ಸಭೆ ಕರೆದು ಕೆಲ ಸೂಚನೆ ನೀಡಲಾಗುವುದು. ಈ ಬಾರಿಯೂ ಗಣೇಶ ಮಂಡಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ರಸ್ತೆ ದುರಸ್ತಿ ಶೀಘ್ರ: ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ, ನಗರದಲ್ಲಿ ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಮಳೆ ಕಡಿಮೆಯಾದರೆ 3-4 ದಿನದಲ್ಲಿ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು. ಏಕಗವಾಕ್ಷಿ ಕೇಂದ್ರ ತೆರೆಯಲಾಗುವುದು. ಹೆಚ್ಚು ಪ್ರಖರ ವಿದ್ಯುತ್‌ ದೀಪಗಳನ್ನು ಅಳವಡಿಕೆ, ಮೆರವಣಿಗೆ ಮಾರ್ಗದಲ್ಲಿ ತೊಂದರೆ ಉಂಟು ಮಾಡುವ ಗಿಡಗಳ ಟೊಂಗೆಗಳ ತೆರವು ಮಾಡಲಾಗುವುದು. ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. 

Advertisement

ಮಂಡಳದ ಮುಖಂಡ ನೇತಾಜಿ ಜಾಧವ ಮಾತನಾಡಿ, ಗಣೇಶ ಹಬ್ಬದ ವೇಳೆಯೇ ಮೊಹರಂ ಹಬ್ಬ ಇದೆ. ಹೀಗಾಗಿ ಮೊಹರಂ ಪಂಜಾ ಮೆರವಣಿಗೆಗೆ ಸಮಸ್ಯೆಯಾಗದಂತೆ ಶಾಂತಿಯುತವಾಗಿ ನಡೆಯಲು ಮಂಡಳದವರು ಅನುಕೂಲ ಮಾಡಿಕೊಡಬೇಕು. ಕಳೆದ ವರ್ಷ ಗಣೇಶ ವಿಸರ್ಜನೆ ವೇಳೆ ಗಲಾಟೆಯಾದಾಗ ಲಾಠಿಚಾರ್ಜ್‌ ನಡೆದಿತ್ತು. ಈ ಬಾರಿ ಅಂಥ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಬೇಕು ಎಂದರು.

ಡಾಲ್ಬಿ ಬಳಕೆಗೆ ನಿರ್ದೇಶನ: ಅಶೋಕ ನಗರದ ರಾಜು ಮಗದುಮ್ಮ ಮಾತನಾಡಿ, ಡಾಲ್ಬಿ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕು. ಡಾಲ್ಬಿ ಹಾಗೂ ಪಟಾಕಿಗೆ ಬಳಸುವ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡುವ ಮೂಲಕ ಔದಾರ್ಯತೆ ಮೆರೆಯಬೇಕು ಎಂದು ಸಲಹೆ ನೀಡಿದರು. ಶ್ರೀನಿವಾಸ ತಾಳೂಕರ ಮಾತನಾಡಿ, ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಬಗೆಹರಿಸಬೇಕು. ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಇದು ಗಣೇಶೊತ್ಸವಕ್ಕೂ ಅನುಕೂಲ ಆಗಲಿದೆ ಎಂದರು.

ಗಣೇಶ ಹಬ್ಬದಲ್ಲಿ ಮಾತ್ರ ಡಾಲ್ಬಿ ನಿಷೇಧದ ಬಗ್ಗೆ ಚರ್ಚೆ ಮಾಡುತ್ತಿರುವುದು ಏಕೆ. ನಗರದಲ್ಲಿ ನಡೆಯುವ ಎಲ್ಲ ಹಬ್ಬಗಳಿಗೂ ಡಾಲ್ಬಿ ನಿಷೇಧಿಸಬೇಕು. ಡಿಸೆಂಬರ್‌ವರೆಗೆ ಎಲ್ಲ ಹಬ್ಬಗಳೂ ಮುಗಿಯುತ್ತವೆ. ಹೀಗಾಗಿ ಜನೇವರಿಯಲ್ಲಿ ಎಲ್ಲರೂ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಂಡಳದ ಪದಾಧಿಕಾರಿಯೊಬ್ಬರು ಮನವಿ ಮಾಡಿದರು.

ನಗರದಲ್ಲಿ ಗಣೇಶೋತ್ಸವ ವೇಳೆ ದಿನದ 24 ಗಂಟೆಯೂ ವಿದ್ಯುತ್‌ ಪೂರೈಸಲಾಗುವುದು. ಎಲ್ಲಿ ಸಮಸ್ಯೆ ಇದೆ ಎಂಬುದನ್ನು ನೋಡಿಕೊಳ್ಳಲಾಗುತ್ತಿದೆ. ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ಡಿಸಿಪಿಗಳಾದ ಸೀಮಾ ಲಾಟ್ಕರ, ಮಹಾಲಿಂಗ ನಂದಗಾಂವಿ, ಮಂಡಳದ ಮುಖಂಡ ವಿಕಾಸ ಕಲಘಟಗಿ, ಎಸಿಪಿಗಳು ಹಾಗೂ ಇನ್ಸಪೆಕ್ಟರ್‌ ಗಳು ಸೇರಿದಂತೆ ಗಣಪತಿ ಮಂಡಳಗಳ ಎಲ್ಲ ಪದಾಧಿಕಾರಿಗಳು ಇದ್ದರು.

ಡಾಲ್ಬಿ ಮಾಲೀಕರ ಸಭೆ ಕರೆಯಿರಿ
ಗಣೇಶೋತ್ಸವ ಮೂರು ತಿಂಗಳು ಇರುವ ಮುನ್ನವೇ ಶಹಾಪುರ ಇನ್ಸಪೆಕ್ಟರ್‌ ನೇತೃತ್ವದಲ್ಲಿ ನಾವೆಲ್ಲರೂ ಜಾಗೃತಿ ಮೂಡಿಸಿದ್ದೇವೆ. ಡಾಲ್ಬಿ ಬಗ್ಗೆ ಇರುವ ಗೊಂದಲವನ್ನು ಮೊದಲು ನಿವಾರಿಸಬೇಕು. ಡಾಲ್ಬಿ ಹಚ್ಚಿದ ಬಳಿಕ ಪೊಲೀಸರು ಕೇಸು ದಾಖಲಿಸುವ ಮೊದಲು ಮೊದಲೇ ಡಾಲ್ಬಿ ಮಾಲೀಕರು ಹಾಗೂ ಮಂಡಳದವರನ್ನು ಕರೆಯಿಸಿ ಸಭೆ ನಡೆಸಿ ಚರ್ಚೆ ನಡೆಸಬೇಕು ಎಂದು ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಸಲಹೆ ನೀಡಿದರು.

ಶೀಘ್ರ ಬ್ಯಾನರ್‌ ತೆರವು
ಹೋರ್ಡಿಂಗ್‌ ಮುಕ್ತ ನಗರವನ್ನಾಗಿಸಲು ಸಹಕರಿಸಬೇಕು. ಯಾವುದೇ ಕಾರಣಕ್ಕೂ ಬ್ಯಾನರ್‌ಗಳನ್ನು ಅಳವಡಿಸಲು ಅನುಮತಿ ನೀಡುವುದಿಲ್ಲ. ಈಗಾಗಲೇ ಇರುವ ಅಧಿಕೃತ ಅಥವಾ ಅನಧಿಕೃತ ಬ್ಯಾನರ್‌ ಗಳನ್ನು ತೆರವುಗೊಳಿಸಲಾಗುವುದು. ಇದರಲ್ಲಿ ಸಾರ್ವಜನಿಕರಲ್ಲಿ ಗೊಂದಲ ಬೇಡ. ಹೀಗಾಗಿ ಇದಕ್ಕೆ ಎಲ್ಲರೂ ಸಹಕರಿಸಬೇಕು.
ಶಶಿಧರ ಕುರೇರ
ಮಹಾನಗರ ಪಾಲಿಕೆ ಆಯುಕ್ತರು

ಡಾಲ್ಬಿ ಹಣ ನೆರೆ ಪರಿಹಾರ
ಗಣೇಶೋತ್ಸವ ವೇಳೆ ಬಳಸುವ ಡಾಲ್ಬಿಯ ಹಣವನ್ನು ಈ ಸಲ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದರೆ ಅನುಕೂಲವಾಗುತ್ತದೆ. ಮಾನವೀಯ ನೆಲೆಗಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬೆಳಗಾವಿಗರು ಹೊಸ ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾಗಬೇಕು. ಒಂದು ವೇಳೆ ಡಾಲ್ಬಿ ಬಳಸುವುದಾದರೆ ಜಿಲ್ಲಾಡಳಿತದ ಅನುಮತಿ ಪಡೆದು ಹೇರಿರುವ ನಿರ್ಬಂಧಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಸುಳ್ಳು ಸಂದೇಶ ಹರಿದಾಡಿದರೆ ವಾಟ್ಸ್‌ಆ್ಯಪ್‌ ಗ್ರುಪ್‌ನ ಅಡ್ಮಿನ್‌ನ್ನು ಹೊಣೆ ಮಾಡಲಾಗುವುದು. 
 ಡಾ| ಡಿ.ಸಿ. ರಾಜಪ್ಪ, ಮಹಾನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next