ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ನಗರದ ಐತಿಹಾಸಿಕ ಸ್ಮಾರಕ ಆನಂದ ಮಹಲ್,ಹೆರಿಟೇಜ್ ಪಾಥ್‌ವೇ ಕಾಮಗಾರಿ, ಗಗನ ಮಹಲ್ ಕಂದಕದಿಂದ ಇತರೆ ಸ್ಮಾರಕಗಳಿಗೆ ನೀರು ಸರಬರಾಜು ಮಾಡುವ ಸ್ಥಳ ಪರಿಶೀಲಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಅಭಿವೃದ್ಧಿಗಾಗಿ ಕಳುಹಿಸಿದ ಪ್ರಸ್ತಾವನೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ಆನಂದ ಮಹಲ್ ಪಾರಂಪರಿಕಕಟ್ಟಡದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡ ಸಂರಕ್ಷಣೆ ಕುರಿತು ಪರಿಶೀಲಿಸಿದರು.
1.36 ಕೋಟಿ ರೂ. ವೆಚ್ಚದಲ್ಲಿ ನಗರದ ಪ್ರಮುಖ ಐತಿಹಾಸಿಕ ಸ್ಮಾರಕಗಳ ಬಳಿನಿರ್ಮಿಸಿರುವ ಉದ್ಯಾನವನಗಳಿಗೆ ಗಗನ ಮಹಲ್ ಕಂದಕದಿಂದ ನೀರು ಸರಬರಾಜಿನ ಕಾಮಗಾರಿ ಕುರಿತು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ಪರಿಸರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಗೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರವಾಸೋದ್ಯಮ, ತೋಟಗಾರಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಇದ್ದರು.
ಇದಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಹರಣ ಶಿಕಾರಿ ಬಡಾವಣೆಯಲ್ಲಿನ ವೀಕ್ಷಣಾಲಯ ಹಾಗೂ ಮನಗೂಳಿ ರಸ್ತೆಯಲ್ಲಿ ಬರುವ ಸರಕಾರಿ ಬಾಲಕರಬಾಲಮಂದಿರಕ್ಕೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ಕೆಆರ್‌ಐಡಿಎಲ್ ನಿರ್ಮಿಸಿರುವ ವೀಕ್ಷಣಾಲಯದ ಕಟ್ಟಡ ಹಾಗೂ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಹಿರಿಯ ಬಾಲಕರ ಬಾಲ ಮಂದಿರದ ಕಟ್ಟಡ ಕಾಮಗಾರಿ ಪರಿಶಿಲಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಿರ್ಮಲಾ ಸುರಪುರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮುಜಂದಾರ ಇದ್ದರು.