ದಾವಣಗೆರೆ: ಅಕ್ರಮ ಮರಳುಗಾರಿಕೆ ತಡೆಗಟ್ಟುವ ಕಾರ್ಯಾಚರಣೆಗೆ ಮುಂದಾದ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹತ್ಯೆಗೆ ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರದ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಗ್ರಾಮ ಲೆಕ್ಕಾಧಿಕಾರಿ ಕಾಂತ್‌ರಾಜ್ ಹಾಗೂ ಸಿಬ್ಬಂದಿ ಮರಳು ಸಾಗಾಣಿಕೆ ಸಜ್ಜಾಗಿದ್ದ ಹಲವಾರು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಅಧಿಕಾರಿಗಳ ದಾಳಿ ವಿಷಯ ತಿಳಿದ 60ಕ್ಕೂ ಹೆಚ್ಚು ದುಷ್ಕರ್ಮಿಗಳು ಉಡುಪಿ ಜಿಲ್ಲಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಕಾಂತ್‌ರಾಜ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಾರುಗಳ ಮೇಲೆ ಪೆಟ್ರೋಲ್ ಚೆಲ್ಲಿ, ಕೊಲೆಗೆ ಯತ್ನಿಸಿದ್ದಾರೆ. ಕೂಡಲೇ ಎಲ್ಲಾ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಲೆಕ್ಕಾಧಿಕಾರಿಗಳು ಒತ್ತಾಯಿಸಿದರು.
ರಾಜ್ಯಾದ್ಯಂತ ಮರಳು ಮಾμಯಾದ ಅಟ್ಟಹಾಸ ಮಿತಿ ಮೀರಿದೆ. ಅಕ್ರಮ ಮರಳುಗಾರಿಕೆ ತಡೆಗೆ ಮುಂದಾಗುವ ಅಧಿಕಾರಿಗಳು, ನೌಕರರ ಮೇಲೆ ಹಲ್ಲೆ, ಕೊಲೆ ಯತ್ನದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೇ ರಕ್ಷಣೆಯೇ ಇಲ್ಲದಂತಾಗಿದೆ.
ಸರ್ಕಾರ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ವಿಜಯಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಹಿರೇಗೌಡರ್, ರೇಖಾ, ಶ್ರೀನಿವಾಸ್ ಇತರರು ಇದ್ದರು.