Advertisement

ಹಳ್ಳಿಗಾಡಿನ ಜನರ ದಾಹ ನೀಗಿಸಿದ ಡಿಬಿಒಟಿ

03:59 PM Mar 10, 2020 | Suhan S |

ನರಗುಂದ: ಹಿಂದಿನಿಂದಲೂ ಮಲಪ್ರಭಾ ಕಾಲುವೆ ಮತ್ತು ಕೆರೆಗಳ ನೀರನ್ನೇ ಅವಲಂಬಿಸಿದ್ದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೀಗ ಡಿಬಿಒಟಿ ಯೋಜನೆ ಜನರ ಕುಡಿಯುವ ನೀರಿನ ದಾಹ ನೀಗಿಸಿದೆ. ದಶಕಗಳ ಕಾಲ ತಲೆದೋರಿದ್ದ ಕುಡಿಯುವ ನೀರಿನ ಭವಣೆ ತಪ್ಪಿಸುವಲ್ಲಿ ಇದು ಶಾಶ್ವತ ಯೋಜನೆಯಾಗಿದೆ.

Advertisement

30 ಹಳ್ಳಿಗಳನ್ನು ಒಳಗೊಂಡ ನರಗುಂದ ತಾಲೂಕು ಬಹುತೇಕ ಗ್ರಾಮಗಳು ಕುಡಿಯುವ ನೀರಿಗೆ ಕೆರೆಗಳನ್ನೇ ಅವಲಂಬಿಸಿದ್ದವು. ಕೆರೆಗಳಿಗೆ ಮಲಪ್ರಭಾ ಕಾಲುವೆ ನೀರು ತುಂಬಿಸಲಾಗುತ್ತಿತ್ತು. ಹೀಗಾಗಿ ತಾಲೂಕಿನ ಜನತೆಗೆ ಮಲಪ್ರಭಾ ಕಾಲುವೆ ಮತ್ತು ಕೆರೆಗಳು ಕುಡಿಯುವ ನೀರಿನ ಮೂಲವಾಗಿದ್ದವು. ಇದೀಗ ಗ್ರಾಮೀಣ ಪ್ರದೇಶಗಳ 28 ಹಳ್ಳಿಗಳಿಗೆ ಡಿಬಿಒಟಿ ಕುಡಿಯುವ ನೀರು ಒದಗಿಸುತ್ತಿದೆ.

ಜಲಾಶಯದಿಂದ ಪೂರೈಕೆ: ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಲ್ಲಿ ಗ್ರಾಮೀಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆ(ಡಿಬಿಒಟಿ) ರೂಪಿಸಲಾಗಿತ್ತು. 2018ರಲ್ಲಿ ನರಗುಂದ ಮತ್ತು ರೋಣ ತಾಲೂಕುಗಳ 128 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 448 ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು. ಸವದತ್ತಿ ತಾಲೂಕು ಮುನವಳ್ಳಿ ಬಳಿ ನವಿಲುತೀರ್ಥ ಜಲಾಶಯದಿಂದ 26 ಕಿಮೀ ಪೈಪ್‌ ಲೈನ್‌ ಮೂಲಕ ನೀರು ತಂದು ತಾಲೂಕಿನ ಚಿಕ್ಕನರಗುಂದ ಬಳಿ ಸ್ಥಾಪಿಸಿದ, ದಿನಕ್ಕೆ 26 ದಶಲಕ್ಷ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಸೇರಿಸಿ ಅಲ್ಲಿಂದ 600 ಕಿಮೀ ಪೈಪ್‌ ಲೈನ್‌ನಿಂದ 2 ತಾಲೂಕುಗಳಿಗೆ ಪೂರೈಸಲಾಗುತ್ತಿದೆ.

ತಾಲೂಕಿನ 28 ಹಳ್ಳಿಗಳಲ್ಲಿ 26 ಹಳ್ಳಿಗಳಿಗೆ ಡಿಬಿಒಟಿ ಸಂಪರ್ಕ ಕಲ್ಪಸಿದೆ. ಕ್ಲೊರಿನೇಶನ್‌ ಒಳಗೊಂಡಿದ್ದರಿಂದ ಪ್ರಾರಂಭದಲ್ಲಿ ಕೆಲ ಗ್ರಾಮಗಳಲ್ಲಿ ನೀರು ಕುಡಿಯಲು ಬಳಕೆಗೆ ಹಿಂದೇಟು ಹಾಕಿದ ಉದಾಹರಣೆ ಇದ್ದರೂ ಕಳೆದ 2 ವರ್ಷಗಳಲ್ಲಿ ಜಲಾಶಯ ನೀರನ್ನು ಬಳಕೆಗೆ ತಾಲೂಕಿನ ಜನತೆ ಮುಂದಾಗಿದ್ದಾರೆ. ಪ್ರತಿ ಗ್ರಾಮದ ಓರ್ವ ವ್ಯಕ್ತಿಗೆ ಸರಾಸರಿ ದಿನಕ್ಕೆ 70 ಲೀಟರ್‌ ಶುದ್ಧ ನೀರು ಒದಗಿಸಲಾಗುತ್ತಿದೆ. 2047ರವರೆಗಿನ ಜನಸಂಖ್ಯೆ ಆಧರಿಸಿ ಯೋಜನೆ ರೂಪಿಸಲಾಗಿದೆ. ಇಸ್ರೇಲ್‌ ಮೂಲದ ತಹಲ್‌ ಕನ್ಸಲ್ಟಿಂಗ್‌ ಇಂಜಿನಿಯರ್ ಲಿಮಿಟೆಟ್‌ ಏಜೆನ್ಸಿ ಡಿಬಿಒಟಿ ಯೋಜನೆ ಅನುಷ್ಠಾನಗೊಳಿಸಿದ್ದು, 5 ವರ್ಷ ಯೋಜನೆ ನಿರ್ವಹಿಸಲಿದೆ.

ಹೈಡ್ರಾಲಿಕ್‌ ಡಿಜೈನ್‌ ಮೂಲಕ ರೂಪಿತಗೊಂಡ ಈ ಯೋಜನೆಯಡಿ ಪ್ರತಿ ಗ್ರಾಮಕ್ಕೆ ನೀರು ಮಾಹಿತಿ ಪೂರೈಕೆ ಡಿಜಿಟಲ್‌ ಆಧಾರದಲ್ಲಿ ಸಂಗ್ರಹವಾಗುತ್ತಿದೆ. ಆಯಾ ಗ್ರಾಮದ ಒಂದು ಟ್ಯಾಂಕ್‌ ಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮ ವ್ಯಾಪ್ತಿಯಲ್ಲಿ ಡಿಬಿಒಟಿ ತಂತ್ರಜ್ಞಾನಕ್ಕೆ ಪೂರಕವಾಗಿ ಕೆಲವೆಡೆ ನೀರು ಸರಬರಾಜು ಮಾಡುವ ವ್ಯವಸ್ಥೆ ಸುಧಾರಣೆ ಹೊಂದಬೇಕಾಗಿದೆ.

Advertisement

ಗ್ರಾಮೀಣ ಪ್ರದೇಶಕ್ಕೆ ನೇರವಾಗಿ ನವಿಲುತೀರ್ಥ ಜಲಾಶಯ ನೀರು ಪೂರೈಸಲಾಗುತ್ತಿದ್ದರೂ ಇನ್ನೂ ಕೆಲ ಗ್ರಾಮಗಳಲ್ಲಿ ಕುಡಿಯಲು ಕೊಳವೆಬಾವಿ, ಕೆರೆಗಳ ನೀರು ಬಳಕೆಯಲ್ಲಿದೆ. ತಾಲೂಕಿನ ಜನತೆಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಡಿಬಿಒಟಿ ಯೋಜನೆ ನೀರನ್ನು ಕುಡಿಯಲು ಬಳಕೆ ಮಾಡಿಕೊಳ್ಳುವಲ್ಲಿ ಜನತೆ ಕ್ರಮೇಣ ಪರಿವರ್ತನೆ ಆಗುತ್ತಿರುವ ಮಾತು ಕೇಳಿ ಬರುತ್ತಿದೆ.

ಶಾಶ್ವತ ಪರಿಹಾರ ಯೋಜನೆ :  2018ರಲ್ಲಿ ಅನುಷ್ಠಾನಗೊಂಡ ಡಿಬಿಒಟಿ ಯೋಜನೆಗೆ ತಾಲೂಕಿನ ಜನತೆ ಕ್ರಮೇಣ ಹೊಂದಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಸರಬರಾಜು ಕಾರ್ಯ ಸುಧಾರಣೆ ಆಗಬೇಕಿದೆ. ಅಂದಾಗ ನೀರಿನ ಪೋಲು ತಡೆಗಟ್ಟಬಹುದು. ಡಿಬಿಒಟಿ ಡಿಜೈನ್‌ ಮಾದರಿಯಲ್ಲಿ 5 ಗ್ರಾಮಗಳಲ್ಲಿ ಪ್ರಾಯೋಗಿಕ ವ್ಯವಸ್ಥೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ದೇವರಾಜ ದೇಸಾಯಿ, ಡಿಬಿಒಟಿ ಯೋಜನಾ ವ್ಯವಸ್ಥಾಪಕರು

ಶಾಶ್ವತ ಪರಿಹಾರ ಯೋಜನೆ :  2018ರಲ್ಲಿ ಅನುಷ್ಠಾನಗೊಂಡ ಡಿಬಿಒಟಿ ಯೋಜನೆಗೆ ತಾಲೂಕಿನ ಜನತೆ ಕ್ರಮೇಣ ಹೊಂದಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಸರಬರಾಜು ಕಾರ್ಯ ಸುಧಾರಣೆ ಆಗಬೇಕಿದೆ. ಅಂದಾಗ ನೀರಿನ ಪೋಲು ತಡೆಗಟ್ಟಬಹುದು. ಡಿಬಿಒಟಿ ಡಿಜೈನ್‌ ಮಾದರಿಯಲ್ಲಿ 5 ಗ್ರಾಮಗಳಲ್ಲಿ ಪ್ರಾಯೋಗಿಕ ವ್ಯವಸ್ಥೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ದೇವರಾಜ ದೇಸಾಯಿ, ಡಿಬಿಒಟಿ ಯೋಜನಾ ವ್ಯವಸ್ಥಾಪಕರು

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next