Advertisement
ಮುಂಗಾರು ಹಿಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲೆಯ ಐದೂ ತಾಲೂಕುಗಳನ್ನು (ಎರಡು ಹೊಸ ತಾಲೂಕುಗಳು ಸೇರಿ) ರಾಜ್ಯ ಸರಕಾರ ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ರಾಜ್ಯ ಸರಕಾರ, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ 1040 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಿರುವ ಡಿಬಿಒಟಿ ಕುಡಿಯುವ ನೀರಿನ ಯೋಜನೆ ಗ್ರಾಮೀಣ ಜನರ ಕೈ ಹಿಡಿದಿವೆ.
Related Articles
Advertisement
ಕಳೆದ ಐದು ವರ್ಷಗಳಿಂದ ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬೀಕರ ಬರ ಮುಂದುವರಿದಿದೆ. ವಿವಿಧ ಕುಡಿಯುವ ನೀರಿನ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ ಜಾನುವಾರುಗಳ ಮೇವಿಗೂ ಬರದ ಬಿಸಿ ತಟ್ಟಿದೆ.
ಜಿಲ್ಲಾ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಪ್ರಕಾರ ದನ ಮತ್ತು ಎಮ್ಮೆ ಸೇರಿ 2,03,644 ದನಕರುಗಳು, ಮೇಕೆ 1,06,353, ಕುರಿ 2,59,047 ಹಾಗೂ 23,943 ಇತರೆ ಸೇರಿದಂತೆ ಒಟ್ಟು 5,92,987 ಜಾನುವಾರುಗಳಿವೆ. 2018ರ ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದು, ಶೇ.84.70ರಷ್ಟು ಬೆಳೆ ಹಾನಿಯಾಗಿದೆ. ಜಿಲ್ಲೆಯ ಹಿಂಗಾರಿನ ಪ್ರಮುಖದ ಬೆಳೆಗಳಾದ ಜೋಳ, ಶೇಂಗಾ ಹಾಗೂ ಕಡಲೆ ಬೆಳೆಗಳು ಬಹುತೇಕ ಹಾನಿಯಾಗಿದ್ದರಿಂದ ಮೇವಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ಶನಿವಾರ ನಡೆದ ನಡೆದ ವಾರದ ಸಂತೆಯಲ್ಲಿ ಒಣ ಮೇವು ಟ್ರ್ಯಾಕ್ಟರ್‌ವೊಂದಕ್ಕೆ 4,500ರಿಂದ 7,000 ರೂ. ಬೆಲೆಯಲ್ಲಿ ಮಾರಾಟವಾಗಿದೆ. ಕಡಲೆ ಹೊಟ್ಟು ಟ್ರ್ಯಾಕ್ಟರ್‌ವೊಂದಕ್ಕೆ 4,000 ಸಾವಿರ ರೂ., ಶೇಂಗಾ ಹೊಟ್ಟು 6,000 ರೂ. ಬೆಲೆಯಲ್ಲಿ ರೈತರು ಖರೀದಿದ್ದಾರೆ. ಇನ್ನು, ಮೇವು ಖರೀದಿಸಲಾಗದ ರೈತರು ಅನಿವಾರ್ಯವಾಗಿ ತಮ್ಮ ಎತ್ತು, ಎಮ್ಮೆ ಹಾಗೂ ಜಾನುವಾರುಗಳನ್ನು ಮತ್ತೂಬ್ಬರ ಕೈಗಿಡುವಂತಾಗಿದೆ.
ಮನೆ ಮಗನಂತೆ ಪ್ರೀತಿ, ಅಕ್ಕರೆಯಿಂದ ಬೆಳೆಸಿದ ಎತ್ತುಗಳನ್ನು ರೈತರು ಒಲ್ಲದ ಮನಸ್ಸಿನಿಂದಲೇ ಸಂತೆಗಳಿಗೆ ಎಳೆದು ತರುತ್ತಿದ್ದಾರೆ. ಮಳೆ ಅಭಾವದ ಹಿನ್ನೆಲೆಯಲ್ಲಿ ದನಕರುಗಳನ್ನು ಖರೀದಿಸುವವರಿಲ್ಲ. ಕೇಳಿದವರೂ ಜೋಡಿ ಎತ್ತುಗಳಿಗೆ 25,000ರಿಂದ 60,000 ರೂ. ಬೆಲೆ ಕಟ್ಟುತ್ತಾರೆ. ಆದರೆ, ತಾವು ಜೋಡಿ ಎತ್ತುಗಳನ್ನು 90,000 ರೂ. ಬೆಲೆಯಲ್ಲಿ ಖರೀದಿಸಿದ್ದರೂ ಕೇಳಿದ ಧಾರಣೆಗೆ ನೀಡುವಂತಾಗಿದೆ ಎಂಬುದು ರೈತರ ಮಾತು.
ಗೋಶಾಲೆಗೆ ಮಿಶ್ರ ಪ್ರತಿಕ್ರಿಯೆ: ಬರಗಾಲ ಹಾಗೂ ರೈತರ ಬೇಡಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಶು ಸಂಗೋಪನಾ ಇಲಾಖೆಗಳ ಸಹಯೋಗದಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಗೋಶಾಲೆ ಪ್ರಾರಂಭಿಸಿದೆ. ಬಿಸಿಲು, ಮಳೆ, ಗಾಳಿಯಿಂದ ರಕ್ಷಣೆಗಾಗಿ ಸುಸಜ್ಜಿತವಾದ ಬೃಹತ್ ಪ್ರಮಾಣದ ನಾಲ್ಕು ತಗಡಿನ ಶೆಡ್, ನಾಲ್ಕಾರು ನೀರಿನ ತೊಟ್ಟಿ ನಿರ್ಮಿಸಿದೆ. ಒಣ ಮೇವು ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ ರೈತರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಡಂಬಳ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 2,500 ಜಾನುವಾರುಗಳಿವೆ. ಹೀಗಾಗಿ ಕನಿಷ್ಠ ಎಂದರೂ 400 ಜಾನುವಾರುಗಳಿಗೆ ಬರುವ ನಿರೀಕ್ಷೆಯಿತ್ತು. ಆದರೆ, ಗೋಶಾಲೆಗೆ ಬಂದಿರೋದು ಕೇವಲ 41. ಅವುಗಳಲ್ಲಿ 2 ಎತ್ತು, 3 ಎಮ್ಮೆ, 2 ಎಮ್ಮೆ ಕರ ಹಾಗೂ ಇನ್ನುಳಿದಿದ್ದು ಆಕಳ ಮತ್ತು ಆಕಳ ಕರಗಳು ಎನ್ನುತ್ತಾರೆ ಗೋಶಾಲೆ ಸಿಬ್ಬಂದಿ. ಸದ್ಯ ರೈತರ ಬಳಿ ಸುಮಾರು 60,542 ಟನ್ ಮೇವು ದಾಸ್ತಾನಿದೆ. ಅಲ್ಲದೇ, ಎರಡು ವರ್ಷಗಳಿಂದೆ ಇದೇ ಗ್ರಾಮದಲ್ಲಿ ಆರಂಭಿಸಿದ್ದ ಗೋಶಾಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು, ನೀರು ಸಿಗದೇ, ಸೊರಗಿರುದ್ದವು. ಹೀಗಾಗಿ ರೈತರು ಗೋಶಾಲೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ.
24 ಹಳ್ಳಿಗಳಲ್ಲಿ ಮೇವು ಬ್ಯಾಂಕ್: ಜಿಲ್ಲೆಯಲ್ಲಿ ಬರಗಾಲದ ಹಿನ್ನೆಲೆಯಲ್ಲಿ ನರಗುಂದ ಹೊರತಾಗಿ ಇನ್ನುಳಿದ ನಾಲ್ಕು ತಾಲೂಕಿನ ಒಟ್ಟು 24 ಗ್ರಾಮಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. 193 ಟನ್ ಮೇವು ದಾಸ್ತಾನು ಮಾಡಿದೆ. ಪ್ರತಿ ಕೆಜಿ 2 ರೂ. ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಮಾರ್ಕಂಡೆ ಮಾಹಿತಿ ನೀಡಿದರು.