ಕುಂದಾಪುರ: ಯಶವಂತಪುರದಿಂದ ಕುಂದಾಪುರ, ಕಾರವಾರಕ್ಕೆ ಆಗಮಿಸುವ ಹಗಲು ರೈಲು (ವಿಸ್ಟಾಡೋಮ್) ವಿಳಂಬ ಹಾಗೂ ನಿಧಾನಗತಿಯ ಸಂಚಾರದಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಕುಂದಾಪುರದ ರೈಲ್ವೇ ಪ್ರಯಾಣಿಕರ ಸಮಿತಿ ಮಾಡಿರುವ ಮನವಿಗೆ ಸ್ಪಂದಿಸಿರುವ ಇಲಾಖೆಯು ಒಂದೂವರೆ ಗಂಟೆ ಮುಂಚಿತವಾಗಿ ಕುಂದಾಪುರಕ್ಕೆ ತಲುಪುವಂತೆ ಕ್ರಮ ಕೈಗೊಂಡಿದೆ.
ಯಶವಂತಪುರ-ಕಾರವಾರ ಹಗಲು ರೈಲು ಈ ಹಿಂದೆ ಕುಂದಾಪುರಕ್ಕೆ ರಾತ್ರಿ 8 ಗಂಟೆಗೆ ಬರುತ್ತಿತ್ತು. ಮಂಗಳೂರಿಗೆ ಸಂಜೆಯೇ ತಲುಪಿದರೂ ಅಲ್ಲಿ ಒಂದೆರಡು ತಾಸು ನಿಲುಗಡೆಯಾಗಿ ಬರುವುದರಿಂದ ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ನೈಋತ್ಯ ರೈಲ್ವೇ ಜನರಲ್ ಮ್ಯಾನೇಜರ್ ಅವರನ್ನು ಭೇಟಿಯಾಗಿ ಪರಿಹರಿಸಲು ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಜನರಲ್ ಮ್ಯಾನೇಜರ್ ಅವರು ಮಂಗಳೂರಿನಲ್ಲಿ ನಿಲ್ಲುವ ಸಮಯ ಕಡಿತಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್‌ನ ಚಳಿಗಾಲದ ಅಧಿವೇಶನ?
ಇನ್ನು ಮುಂದೆ ಈ ರೈಲು ಪ್ರತೀ ದಿನ ಬೆಳಗ್ಗೆ 8ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಸಂಜೆ 6.50ರ ಸುಮಾರಿಗೆ ಕುಂದಾಪುರಕ್ಕೆ ಆಗಮಿಸಲಿದೆ. ಇದರಿಂದ ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಯಾಣಿಸುವವರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಸಂಜೆ 6 ಗಂಟೆಗೂ ಮೊದಲೇ ಕುಂದಾಪುರಕ್ಕೆ ತಲುಪುವಂತೆ ವೇಳಾಪಟ್ಟಿ ತಯಾರಿಸುವಂತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳನ್ನು ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.