Advertisement
ನಾನು ಅಂಗನವಾಡಿಗೆ ಹೋಗುತ್ತಿದ್ದ ಸಮಯದಲ್ಲಿ ನಡೆದ ಘಟನೆಯಿದು. ನಮ್ಮ ಟೀಚರ್ ನಮಗೆಲ್ಲ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅವುಗಳಲ್ಲಿ ಓಟ, ಕಪ್ಪೆ ಜಿಗಿತ, ನೆನಪಿನ ಶಕ್ತಿ ಆಟಗಳಂತಹ ಸ್ಪರ್ಧೆಗಳು ಕೆಲವು. ನಾವೆಲ್ಲ ಆ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು ಹಾಗೂ ವಿಜೇತರಾದೆವು. ಒಂದು ದಿನ ಬಹುಮಾನ ವಿತರಣಾ ಸಮಾರಂಭವನ್ನು ಕೂಡ ಏರ್ಪಡಿಸಿದ್ದರು. ಆ ದಿನ ನನ್ನ ಗೆಳತಿಯೊಬ್ಬಳು ಬಂದಿರಲಿಲ್ಲ. ಹಾಗಾಗಿ ಅವಳ ಬಹುಮಾನ ಟೀಚರ್‌ನ ಬಳಿಯೇ ಉಳಿದಿತ್ತು. ಮರುದಿನ ಬಂದ ನನ್ನ ಗೆಳತಿಗೆ ಟೀಚರ್ ಅವಳಿಗೆ ಸೇರಬೇಕಾಗಿದ್ದ ಬಹುಮಾನವನ್ನು ಕೊಟ್ಟರು. “ಅವಳಿಗೆ ಬಹುಮಾನ ಕೊಟ್ಟರು. ಆದರೆ ನನಗೆ ಕೊಡಲಿಲ್ಲ’ ಎನ್ನುವ ಬೇಸರದಿಂದ ಮುಖ ಗಂಟು ಹಾಕಿಕೊಂಡು ಮೂಲೆಯಲ್ಲಿ ಕೂತೆ. ನನ್ನ ಗೆಳತಿಗೆ ಬಹುಮಾನ ಕೊಟ್ಟ ದಿನ ನನಗೂ ಕೊಡಲೇಬೇಕಿತ್ತು ಅನ್ನುವ ಸಣ್ಣ ಹೊಟ್ಟೆ ಉರಿ ಅಂತ ಹೇಳಬಹುದೇನೋ ಇದಕ್ಕೆ. ಕುಂಬಳಕಾಯಿ ಥರ ಆಗಿದ್ದ ನನ್ನ ಮುಖವನ್ನು ನೋಡಿದ ಟೀಚರ್‌ಗೆ ನನ್ನ ಬೇಸರಕ್ಕೆ ಕಾರಣ ಏನು ಅಂತ ಗೊತ್ತಾಯೊ¤à ಏನೋ. ತಮ್ಮಲ್ಲಿ ಹೆಚ್ಚಿಗೆ ಉಳಿದಿದ್ದ ಬಹುಮಾನವನ್ನು ನನಗೆ ತಂದು ಕೊಟ್ಟರು. ನನಗೆ ಎಷ್ಟು ಖುಷಿಯಾಯಿ ತೆಂದರೆ ನನ್ನ ಗೆಳತಿಯ ಹತ್ತಿರ “ನನಗೆ ಇನ್ನೊಂದು ಬಹುಮಾನ’ ಅಂತ ಹೇಳಿಕೊಂಡು ಕುಣಿದೆ. ಇದು ನನ್ನ ಚೇಷ್ಟೆಯ ಪರಮಾವಧಿಯಾಗಿದ್ದರೂ ಕೂಡ, ನಮ್ಮ ಟೀಚರ್ ಮಕ್ಕಳಿಗೆ ಬೇಸರವಾಗಬಾರದೆನ್ನುವ ಉದ್ದೇಶ ದಿಂದ ತಮ್ಮಲ್ಲಿ ಉಳಿದಿದ್ದ ಬಹುಮಾನವನ್ನು ನನಗೆ ಕೊಟ್ಟರು. ಇದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆದರೆ, ನಮ್ಮ ಟೀಚರ್‌ನ ಪ್ರೀತಿಯನ್ನು ಕಂಡು ನನ್ನ ಮನ ಕರಗುತ್ತದೆ.
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು