“ಡೇಸ್ ಆಫ್ ಬೋರಾಪುರ’ – ಟೈಟಲ್ ಕೇಳಿದಾಗ ಇದು ಯಾವ ಭಾಷೆಯ ಚಿತ್ರವೆಂದು ನಿಮಗೆ ಕನ್‌ಫ್ಯೂಸ್ ಆಗಬಹುದು. ಸಂದೇಹ ಬೇಡ, ಇದು ಪಕ್ಕಾ ಕನ್ನಡದ ಸಿನಿಮಾ. ಬೋರಾಪುರ ಎಂಬ ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಶಿವರಾಜಕುಮಾರ್ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡ ಹಾಡುಗಳ ಪ್ರದರ್ಶನ ಕೂಡಾ ಮಾಡಿತು.
ಎನ್. ಆದಿತ್ಯ ಈ ಚಿತ್ರದ ನಿರ್ದೇಶಕರು. ಮಧು ಬಸವರಾಜ್ ಹಾಗೂ ಅಜಿತ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಐಟಿ ಹಿನ್ನೆಲೆಯಿಂದ ಬಂದ ನಿರ್ಮಾಪಕರು ಸಿನಿಮಾವನ್ನು ಮಗುವಂತೆ ಪ್ರೀತಿಸಿ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡರು. “ಬೋರಾಪುರ’ದಲ್ಲಿ ಏನಿದೆ ಎಂದರೆ ಇಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ ಹಾಗೂ ದಿನನಿತ್ಯದ ಜೀವನ ಶೈಲಿಯನ್ನು ಇಲ್ಲಿ ಹೇಳಲಾಗಿದೆ.
ಚಿತ್ರದಲ್ಲಿ ಪ್ರಶಾಂತ್, ಸೂರ್ಯ, ಸಿದ್ಧಾರ್ಥ, ಪ್ರಕೃತಿ, ಅಮಿತಾ, ಅನಿತಾ ಭಟ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ದಿನೇಶ್ ಮಂಗಳೂರು, ರಘು ಪಾಂಡೇಶ್ವರ್ ಕೂಡಾ ನಟಿಸಿದ್ದಾರೆ. ನಾಯಕ ಪ್ರಶಾಂತ್ ಇಲ್ಲಿ ಭಗ್ನಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ನಾಯಕಿಯನ್ನು ಸ್ಪರ್ಶಿಸುವುದಿಲ್ಲವಂತೆ. ಆ ತರಹದ ಒಂದು ಪಾತ್ರ ವಿಭಿನ್ನ ಪಾತ್ರ ಅವರಿಗೆ ಸಿಕ್ಕಿದೆಯಂತೆ. ಚಿತ್ರದ ಸಂಭಾಷಣೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಇಡೀ ಸಿನಿಮಾ ಅರ್ಥವಾಗುತ್ತದೆಯಂತೆ. ಚಿತ್ರದಲ್ಲಿ ಅಮಿತಾ ಕೂಡಾ ನಟಿಸಿದ್ದು, ಅವರಿಲ್ಲಿ ಭಾಗ್ಯ ಎಂಬ ಪಾತ್ರ ಮಾಡಿದ್ದಾರಂತೆ. ಇಲ್ಲಿ ತುಂಬಾ ಮೆಚುರ್ ಪಾತ್ರ ಸಿಕ್ಕಿದೆ ಎಂಬುದು ಅಮಿತಾ ಅವರ ಮಾತು. ಚಿತ್ರದಲ್ಲಿ ಪ್ರಕೃತಿ ಎನ್ನುವವರು ಕೂಡಾ ನಟಿಸಿದ್ದು, ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಅನಿತಾ ಭಟ್ ಕೂಡಾ ನಟಿಸಿದ್ದು, ಈ ಹಿಂದೆ ಮಾಡದಂತಹ ಒಂದು ವಿಭಿನ್ನ ಪಾತ್ರ ಅವರಿಗೆ ಸಿಕ್ಕಿದೆಯಂತೆ. ಚಿತ್ರದಲ್ಲಿ ತೆಲುಗು ನಟ ಶಫಿ ಕೂಡಾ ನಟಿಸಿದ್ದಾರೆ. ಇಡೀ ಸಿನಿಮಾ ತುಂಬಾ ನೈಜತೆಯಿಂದ ಕೂಡಿದೆ ಎಂಬುದು ಶಫಿ ಮಾತು.