Advertisement

ದಯಾನಂದ ಶೆಟ್ಟಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಗರಿ

04:36 PM Dec 14, 2017 | |

ಉಡುಪಿ: ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾದ ಹೇರೂರು ದಯಾನಂದ ಶೆಟ್ಟಿಯವರು ಸರಳಾತಿ ಸರಳರು, ಹಿರಿಯ ಕಲಾವಿದರು. 

Advertisement

ಶೆಟ್ಟಿ ಅವರಿಗೆ ಸುಮಾರು 85ರ ಇಳಿವಯಸ್ಸು. ಆದರೆ ತೀರಾ ಇತ್ತೀಚಿನ ವರೆಗೂ ಹೇರೂರಿನ ಮನೆಯಿಂದ ಬ್ರಹ್ಮಾವರದವರೆಗೆ ನಡೆದೇ ಬರುತ್ತಿದ್ದರು. ಸದಾ ಚಟುವಟಿಕೆಶೀಲರಾಗಿರಬೇಕು ಎಂಬ 
ಅವರ ಮನೋಭಾವವೇ ಇದಕ್ಕೆ ಕಾರಣ. ಕೆಲವು ಸಮಯದಿಂದ ಬನ್ನಂಜೆಯಲ್ಲಿ ಆರೋಗ್ಯದ ಕಾರಣಕ್ಕಾಗಿ ಮಗನ ಮನೆಯಲ್ಲಿದ್ದಾರೆ.  

ಶೆಟ್ಟಿಯವರು ಸಾದಾ ಧೋತಿ, ಸಾಮಾನ್ಯ ಅಂಗಿಯನ್ನು ಧರಿಸಿ ಪಾದರಸದಂತೆ ಓಡಾಡುತ್ತಿರುತ್ತಾರೆ. 
“ನನಗೆ ಒಂದು ಸಿನೆಮಾ ಶೂಟಿಂಗ್‌ ಇತ್‌ ಮಾರಾಯೆÅ’ ಎಂದು 20ರ ಹರೆಯದವರನ್ನೂ ನಾಚಿಸುವಂತೆ ಸಿದ್ಧರಾಗುತ್ತಾರೆ.

ಮನೆಗೆ ಬಂದಿದ್ದ ರಾಜ್‌ಕುಮಾರ್‌
ಸುಬ್ಬಯ್ಯ ನಾಯ್ಡು ನಾಟಕ ಕಂಪೆನಿಯಲ್ಲಿ 15 ವರ್ಷ ಕೆಲಸ ಮಾಡಿದ್ದೆ. ಆಗ ಮೇರುನಟ ಡಾ. ರಾಜಕುಮಾರ್‌ ಜತೆಯೂ ನಟಿಸಿದ್ದೆ. ಹಾಗಾಗಿ ಅವರೊಡನೆ ನಿಕಟ ಸಂಪರ್ಕವಿತ್ತು. 1997ರಲ್ಲಿ ಹೇರೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾಗ ಜನವರಿ ಒಂದರಂದು ರಾಜ್‌ಕುಮಾರ್‌ ಅವರೇ ನನ್ನನ್ನು ಹುಡುಕಿಕೊಂಡು ಬಂದು ಶಾಲು ಹೊದೆಸಿ ಹತ್ತು ಸಾವಿರ ರೂ. ನೆರವು ನೀಡಿದ್ದರು.ಆಗ ಅವರೊಂದಿಗೆ ಕಟಪಾಡಿಯ ಅಶೋಕ ಸುವರ್ಣರಿದ್ದರು ಎಂದು ವಿವರಿಸುತ್ತಾರೆ ದಯಾನಂದ ಶೆಟ್ಟರು.

ಕುಂದಗನ್ನಡದ “ಗುಲಾಬಿ ಟಾಕೀಸ್‌’ ಚಿತ್ರದಲ್ಲಿ ಈಗ ಸಚಿವರಾಗಿರುವ ಉಮಾಶ್ರೀಯವರೊಂದಿಗೂ ಶೆಟ್ಟರು ನಟಿಸಿದ್ದರು. ಇತ್ತೀಚಿಗೆ ನಾಗಾಭರಣರ ಸೂಚನೆಯಂತೆ “ನೆರಳು’ ಸಾಕ್ಷ್ಯಚಿತ್ರದಲ್ಲಿ ಗುತ್ತಿನಮನೆ ಯಜಮಾನರ ಪಾತ್ರವನ್ನು ನಿರ್ವಹಿಸಿದ್ದರು. 

Advertisement

ಸಿನೆಮಾ ಲೋಕ
ಶೆಟ್ಟಿಯವರು “ಜೀವನ ತರಂಗ’ (1962), ಚೋಮನದುಡಿ (1975), ಕಲಿತರೂ ಹೆಣ್ಣೇ (1963), ಗುಡ್ಡದಭೂತ (1992), ಗುಲಾಬಿ ಟಾಕೀಸ್‌ (2008), ಕೋಟಿ ಚೆನ್ನಯ (1972-73), ಕರಿಯಣಿ ಕಟ್ಟಂದಿ ಕಂಡನಿ (1978), ಹಣ್ಣೆಲೆ ಚಿಗುರಿದಾಗ ಮೊದಲಾದ  ಚಲನಚಿತ್ರಗಳಲ್ಲಿ ನಟಿಸಿದ್ದರು. 

ಹೆಗಡೆಯವರಿಂದ ಸಿದ್ದರಾಮಯ್ಯವರೆಗೆ…
1948ರಿಂದ 76ರವರೆಗೆ ಸಕ್ರಿಯವಾಗಿ ರಂಗಭೂಮಿಯಲ್ಲಿದ್ದ ಶೆಟ್ಟರಿಗೆ 1985ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಸಂದರ್ಭ ಕಲಾವಿದರಿಗೆ ದೊರಕುವ ಮಾಸಾಶನ ಲಭ್ಯವಾಯಿತು. ತಿಂಗಳಿಗೆ 150 ರೂ. ನಂತೆ ಆರಂಭವಾಗಿ  ಈಗ 1,500 ರೂ. ಗೆ ಏರಿಕೆಯಾಗಿದೆ. ನಾಲ್ಕೈದು ವರ್ಷಗಳಿಂದ ಏರಿಕೆಯಾಗಿಲ್ಲ. ಈ ಕುರಿತು 
ಮನವಿ ಸಲ್ಲಿಸಲು ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಬ್ರಹ್ಮಾವರಕ್ಕೆ ಬಂದಾಗ ಶೆಟ್ಟಿಯವರು ಪ್ರಯತ್ನಿಸಿದರು. ಆದರೆ ಕೆಲವರು ತಡೆದರು. 

ಸಿದ್ದರಾಮಯ್ಯನವರು ಇವರನ್ನು ಕಂಡು ಕರೆದು ಮಾತನಾಡಿಸಿದ್ದಲ್ಲದೆ ಮಾಸಾಶನ ಏರಿಸುವ ಕುರಿತು ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದಿದ್ದರಂತೆ. “ರಾಮಕೃಷ್ಣ ಹೆಗಡೆಯವರ ಕಾಲದಿಂದ ಸಿದ್ದರಾಮಯ್ಯನವರು ಪರಿಚಿತರು. ನನಗೆ  ಬೆಂಗಳೂರಿಗೆ ಹೋಗಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಶೆಟ್ಟಿಯವರು. 

ಹಲವು ನಾಟಕ ಕಂಪೆನಿಗಳು
ಸರ್ವಮಂಗಳ ನಾಟಕ ಕಂಪೆನಿಯಲ್ಲಿ 10 ವರ್ಷ, ಹಲಗೇರಿ ಕಂಪೆನಿಯಲ್ಲಿ ಒಂದು ವರ್ಷ ನಟಿಸಿದ್ದ ಶೆಟ್ಟಿಯವರು ಕಲಾವೈಭವ ನಾಟ್ಯ ಸಂಘದ ಏಣಗಿ ಬಾಳಪ್ಪನವರ ಜತೆ ಮೂರು ತಿಂಗಳು ನಟಿಸಿದ್ದರು. ಭಕ್ತ ಅಂಬರೀಷ‌, ಎಚ್ಚಮ ನಾಯಕ, ಬೇಡರ ಕಣ್ಣಪ್ಪ, ಸತೀಧರ್ಮ, ಶ್ರೀರಾಮಜನನ, ದಾನಶೂರ ಕರ್ಣ, ಟಿಪ್ಪು ಸುಲ್ತಾನ್‌, ಮಕ್ಮಲ್‌ಟೋಪಿ ಮೊದಲಾದ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಎಚ್ಚಮ ನಾಯಕ ನಾಟಕದಲ್ಲಿ ರಾಜ್‌ ಜತೆ ತಿರುವೆಂಕಟ ಪಾತ್ರವನ್ನೂ ನಿರ್ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next