ಚೆನ್ನೈ : ಮಾಜಿ ಮುಖ್ಯಮಂತ್ರಿ, ಡಿಎಂಕೆ ಪರಮೋಚ್ಚ ನಾಯಕ ದಿವಂಗತ ಎಂ ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್ ಅವರನ್ನು ಹಠಾತ್ ಅನಾರೋಗ್ಯದ ಕಾರಣ ಇಲ್ಲಿನ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದೆ.
ಪಿಟಿಐ ವರದಿ ಪ್ರಕಾರ ದಯಾಳು ಅಮ್ಮಾಳ್ ಅವರನ್ನು ನಿನ್ನೆ ಮಂಗಳವಾರ ರಾತ್ರಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಆಕೆಯ ಅನಾರೋಗ್ಯದ ಕಾರಣವಾಗಲೀ, ಆಕೆಯ ತಾಜಾ ಆರೋಗ್ಯ ಸ್ಥಿತಿ ಬಗ್ಗೆ ಆಗಲೀ ಯಾವುದೇ ಮಾಹಿತಿ ಮಾಧ್ಯಮಕ್ಕೆ ಸಿಕ್ಕಿಲ್ಲ. ಇಂದು ಆ ಕುರಿತ ಪ್ರಕಟನೆ ಹೊರ ಬರುವ ನಿರೀಕ್ಷೆ ಇದೆ.
ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್, ಎಂ ಕೆ ಅಳಗಿರಿ, ಎಂ ಕೆ ತಮಿಳರಸು ಮತ್ತು ಎಂ ಕೆ ಸೆಲ್ವಿ ಅವರ ತಾಯಿಯಾಗಿರುವ ದಯಾಳು ಅಮ್ಮಾಳ್ ಅವರು ದಿವಂಗತ ಕರುಣಾನಿಧಿ ಅವರ ಎರಡನೇ ಪತ್ನಿ.
ನಿನ್ನೆ ಮಂಗಳವಾರ ರಾತ್ರಿ 9 ಗಂಟೆಯ ವೇಳೆಗೆ ಹಠಾತ್ ಅನಾರೋಗ್ಯಕ್ಕೆ ಗುರಿಯಾದ ಅಮ್ಮಾಳ್ ಅವರನ್ನು ಒಡನೆಯೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅನಾರೋಗ್ಯದ ಕಾರಣ ಏನೆಂಬುದು ಗೊತ್ತಾಗಿಲ್ಲ.
65ರ ಹರೆಯದ ಎಂ ಕೆ ಸ್ಟಾಲಿನ್ ಅವರು ನಿನ್ನೆಯಷ್ಟೇ ಡಿಎಂಕೆ ಪಕ್ಷದ ಎರಡನೇ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಕರುಣಾನಿಧಿ ಯವರು ಡಿಎಂಕೆ ಪಕ್ಷದ ಮೊದಲ ಅಧ್ಯಕ್ಷರಾಗಿ 1969ರಲ್ಲಿ ಅಧಿಕಾರಕ್ಕೆ ಬಂದಿದ್ದರು.