ನಿರ್ದೇಶಕ ದಯಾಳ್ ಪದ್ಮನಾಭ್ ಬಿಗ್‌ಬಾಸ್ ಮನೆಯಿಂದ ಬಂದ ಬಳಿಕ ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. “ಸತ್ಯ ಹರಿಶ್ಚಂದ್ರ’ ಸಿನಿಮಾ ರಿಲೀಸ್‌ಗು ಮುನ್ನವೇ ಅವರು “ಬಿಗ್‌ಬಾಸ್’ ಮನೆಗೆ ಕಾಲಿಟ್ಟಿದ್ದರು. ಆದರೆ, ಅವರು ಹೆಚ್ಚು ದಿನ ಅಲ್ಲಿ ಇರಲಿಲ್ಲ. ಆ ಮನೆಯಿಂದ ಹೊರ ಬಂದವರು ಒಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಹೌದು, ಮತ್ತೂಮ್ಮೆ ನಾಟಕ ಆಧರಿಸಿದ ಕಥೆಯನ್ನು ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ ದಯಾಳ್.
ಅಂದಹಾಗೆ, ಮೋಹನ್ ಹಬ್ಬು ಅವರು ಬರೆದಿರುವ “ಕರಾಳ ರಾತ್ರಿ’ ಎಂಬ ನಾಟಕವನ್ನು ದಯಾಳ್ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಈಗ ಒಂದಷ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಈ ಚಿತ್ರಕ್ಕೆ ನಾಯಕ ನಾಯಕಿಯ ಆಯ್ಕೆ ಈಗಾಗಲೇ ನಡೆದಿದೆ ಎಂಬುದೇ ವಿಶೇಷ. ಹೌದು, ದಯಾಳ್ ಅವರು “ಬಿಗ್‌ಬಾಸ್’ ಮನೆಗೆ ಹೋಗಿದ್ದ ಸಂದರ್ಭದಲ್ಲೇ ನಾಯಕ, ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ.
ಆ ಮನೆಯಲ್ಲಿ ಜೆಕೆ ಮತ್ತು ಅನುಪಮ ಗೌಡ ಕೂಡ ಸ್ಪರ್ಧಿಗಳಾಗಿದ್ದರು. ಅವರ ಮುಂದೆ ಸಮಯ ನೋಡಿ, ದಯಾಳ್ “ಕರಾಳ ರಾತ್ರಿ’ ನಾಟಕದ ಕಥೆ ಬಗ್ಗೆ ಚರ್ಚಿಸಿದ್ದರು. ಜೆಕೆ ಹಾಗು ಅನುಪಮ ಗೌಡ ಅವರು ಕಥೆ ಕೇಳಿ ಒಪ್ಪಿದ್ದೂ ಆಗಿದೆ. ಇನ್ನೇನಿದ್ದರೂ ಅವರಿಬ್ಬರು ಹೊರಬಂದ ಬಳಿಕ ಸಿನಿಮಾ ಕುರಿತ ಕೆಲಸಗಳು ನಡೆಯಬೇಕಿದೆ. ಇನ್ನು, ನಾಟಕದ ಹಕ್ಕು ಕುರಿತು ಲೇಖಕ ಮೋಹನ್ ಹಬ್ಬು ಅವರಿಂದಲೂ ಪಡೆದಿದ್ದಾರಂತೆ ದಯಾಳ್ ಪದ್ಮನಾಭ್.
ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಫೆಬ್ರವರಿ ವೇಳೆಗೆ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ. ದಯಾಳ್ ಪದ್ಮನಾಭ್ ಅವರಿಗೆ ನಾಟಕವನ್ನು ಸಿನಿಮಾ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ “ಹಗ್ಗದ ಕೊನೆ’ ಕೂಟ ನಾಟಕ ಆಧರಿಸಿ ಮಾಡಿದ ಸಿನಿಮಾ ಆಗಿತ್ತು. ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ “ಹಗ್ಗದ ಕೊನೆ’ ಹಾಗು “ಆ್ಯಕ್ಟರ್’ ಚಿತ್ರಗಳಲ್ಲಿ ಬೆರಳೆಣಿಕೆಯಷ್ಟು ಪಾತ್ರಗಳಿದ್ದವು.
ಅವರೀಗ “ಕರಾಳ ರಾತ್ರಿ’ ಎಂಬ ನಾಟಕವನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಅದೊಂದು ಕ್ರೈಂ ಥ್ರಿಲ್ಲರ್ ಕಥೆ. ಸಿನಿಮಾಗೆ ಇನ್ನೂ ನಾಮಕರಣ ಮಾಡಿಲ್ಲ. ಸದ್ಯಕ್ಕೆ ನಾಯಕ, ನಾಯಕಿ ಆಯ್ಕೆಯಾಗಿದೆ. ಅವರದೇ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಉಳಿದಂತೆ ತಂತ್ರಜ್ಞರು ಮತ್ತು ಇನ್ನಷ್ಟು ಕಲಾವಿದರ ಆಯ್ಕೆ ಬಾಕಿ ಉಳಿದಿದೆ.