ಮುಂಬೈ: ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಪೊಲೀಸ್ ಇನ್ಸ್ ಪೆಕ್ಟರ್ ದಯಾ ನಾಯಕ್ ಅವರನ್ನು ಭಯೋತ್ಪಾದಕ ನಿಗ್ರಹ ದಳ(ಎಟಿಎಸ್)ದಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸಿಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ಇದನ್ನೂ ಓದಿ:ಅಮೃತ್‌ಪಾಲ್ ಸಿಂಗ್ ಪರಾರಿ: ಭಾರತದಲ್ಲಿ ಬಿಬಿಸಿ ಪಂಜಾಬಿಯ ಟ್ವಿಟರ್ ಖಾತೆಗೆ ತಡೆ
ಪೊಲೀಸ್ ಇನ್ಸ್ ಪೆಕ್ಟರ್ ದಯಾ ನಾಯಕ್, ದ್ಯಾನೇಶ್ವರ್ ವಾಘ್, ದೌಲತ್ ಸಾಳ್ವೆ ಸೇರಿದಂತೆ ಏಳು ಮಂದಿ ಇನ್ಸ್ ಪೆಕ್ಟರ್ ಗಳನ್ನು ಭಯೋತ್ಪಾದಕ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಆದೇಶ ಹೊರಡಿಸಿರುವುದಾಗಿ ತಿಳಿಸಿದೆ.
1995ರ ಬ್ಯಾಚ್ ನ ಅಧಿಕಾರಿಯಾಗಿರುವ ದಯಾ ನಾಯಕ್ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿದ್ದ ದಯಾ ನಾಯಕ್ ಈ ಹಿಂದೆ ತಮ್ಮ ಕಾರ್ಯಶೈಲಿಯಿಂದ ವಿವಾದಕ್ಕೊಳಗಾಗಿ, ಇಲಾಖೆಯ ಶಿಸ್ತುಕ್ರಮಕ್ಕೆ ಒಳಗಾಗಿ ಅಮಾನತುಗೊಂಡಿದ್ದರು.
Related Articles
ಭೂಗತ್ತು ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ನೀಡಿರುವ ದೂರಿನ ಮೇರೆಗೆ 2006ರಲ್ಲಿ ದಯಾ ನಾಯಕ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ ನಂತರ ದಯಾ ನಾಯಕ್ ಸುಮಾರು ಆರೂವರೆ ವರ್ಷಗಳ ಕಾಲ ಅಮಾನತ್ತುಗೊಂಡಿದ್ದರು.
2009ರಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಎಸ್.ಎಸ್.ವಿರ್ಕ್ ಅವರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರಗಿಸಲು ಅನುಮತಿ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ 2010ರಲ್ಲಿ ಸುಪ್ರೀಂಕೋರ್ಟ್ ದಯಾ ನಾಯಕ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು.
2012ರಲ್ಲಿ ದಯಾ ನಾಯಕ್ ಅವರನ್ನು ಮತ್ತೆ ಸೇವೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಸ್ಥಳೀಯ ಶಸ್ತ್ರಾಸ್ತ್ರ ಇಲಾಖೆ ಘಟಕಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ನಂತರ ಬಾಂದ್ರಾಕ್ಕೆ ವರ್ಗಾವಣೆ ಮಾಡಲಾಯಿತು. ಏತನ್ಮಧ್ಯೆ 2014ರಲ್ಲಿ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ದಯಾ ನಾಯಕ್ ಡ್ಯೂಟಿಗೆ ಹಾಜರಾಗಿಲ್ಲ. ತನಗೆ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ನಾಗ್ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ದಯಾ ನಾಯಕ್ ಮಹಾರಾಷ್ಟ್ರ ಸರಕಾರ ಮತ್ತು ಡಿಜಿಪಿಗೆ ಪತ್ರ ಬರೆದಿದ್ದರು.
ನಾಗ್ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬ ಆರೋಪದ ಮೇಲೆ 2015ರಲ್ಲಿ ದಯಾ ನಾಯಕ್ ಅವರನ್ನು ಮತ್ತೆ ಅಮಾನತು ಮಾಡಲಾಯಿತು. 2016ರಲ್ಲಿ ದಯಾ ನಾಯಕ್ ಮತ್ತೆ ಕರ್ತವ್ಯಕ್ಕೆ ಮರಳಿದ್ದರು. 2021ರಲ್ಲಿ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಗೆ ದಯಾ ನಾಯಕ್ ಅವರನ್ನು ವರ್ಗಾವಣೆ ಮಾಡಲಾಯ್ತು. ಆದರೆ ಈ ಬಾರಿ ವರ್ಗಾವಣೆ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ಮೆಟ್ಟಿಲೇರಿದ್ದರು. ಬಳಿಕ ವರ್ಗಾವಣೆ ಆದೇಶಕ್ಕೆ ತಡೆ ನೀಡಿತ್ತು.
ದಯಾ ನಾಯಕ್ ಎನ್ ಕೌಂಟರ್ ನಲ್ಲಿ ಸುಮಾರು 80ಕ್ಕೂ ಅಧಿಕ ಗ್ಯಾಂಗ್ ಸ್ಟರ್ಸ್ ಗಳನ್ನು ಹೊಡೆದುರುಳಿಸಿದ್ದರು. ಇದರಲ್ಲಿ ಪಾತಕಿಗಳಾದ ವಿನೋದ್ ಮಟ್ಕಾರ್, ರಫೀಕ್ ಡಬ್ಬಾ, ಸಾದಿಕ್ ಕಾಲಿಯಾ ಹಾಗೂ ಮೂವರು ಲಷ್ಕರ್ ಎ ತೊಯ್ಬಾದ ಸದಸ್ಯರು ಸೇರಿರುವುದಾಗಿ ವರದಿ ತಿಳಿಸಿದೆ.