ಕಾರ್ಕಳ: ಮಹಾರಾಷ್ಟ್ರದ ಖಾರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮೂಲದ ದಯಾ ನಾಯಕ್ ಅವರು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಮುಂಬಯಿ ಘಟಕಕ್ಕೆ ಭಡ್ತಿ ಹೊಂದಿದ್ದಾರೆ. ಈ ಮೂಲಕ ಮುಂಬಯಿ ಎಟಿಎಸ್ ಘಟಕಕ್ಕೆ ಭಡ್ತಿ ಹೊಂದಿದ ಹಿರಿಯ ತುಳು-ಕನ್ನಡಿಗ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
90ರ ದಶಕದಲ್ಲಿ ಮುಂಬಯಿ ಯಲ್ಲಿ ಭೂಗತ ಪಾತಕಿಗಳ ಹಾವಳಿ ಮಿತಿಮೀರಿದ್ದಾಗ ಪೊಲೀಸ್ ಇಲಾಖೆಗೆ ಸೇರಿದ ದಯಾ ನಾಯಕ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 80ಕ್ಕೂ ಅಧಿಕ ಭೂಗತ ಪಾತಕಿಗಳನ್ನು ಎನ್‌ಕೌಂಟರ್ ಮಾಡುವ ಮೂಲಕ “ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್’ ಎಂದೇ ಪ್ರಸಿದ್ಧರಾಗಿದ್ದರು. ಮುಂಬಯಿಯಲ್ಲಿ ಮಾದಕ ಪದಾರ್ಥ ಜಾಲವನ್ನು ಮಟ್ಟ ಹಾಕು ವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದಾರೆ. ನಗರದ ಬಹಳಷ್ಟು ಕ್ಲಿಷ್ಟ ಅಪರಾಧ ಪ್ರಕರಣಗಳನ್ನು ಭೇದಿಸಿದ್ದಾರೆ.
ಅವರಿಗೆ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹುಟ್ಟೂರಾದ ಎಣ್ಣೆಹೊಳೆಯಲ್ಲಿ ಶಾಲೆಯನ್ನು ನಿರ್ಮಿಸಿ ಸರಕಾರಕ್ಕೆ ಒಪ್ಪಿಸಿದ್ದರು. ಅವರ ಜೀವನ ಸಾಧನೆಗಳ ಮೇಲೆ ಬಾಲಿವುಡ್‌ನಲ್ಲಿ ಹಲವು ಸಿನೆಮಾಗಳು ಮೂಡಿಬಂದಿವೆ.
ಪ್ರಾಮಾಣಿಕತೆ, ಶ್ರದ್ಧೆ, ಪರಿಶ್ರಮ, ಕರ್ತವ್ಯ ನಿಷ್ಠೆ, ಸ್ನೇಹಪರತೆ ಇಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎನ್ನಲು ಸಂತೋಷವಾಗುತ್ತಿದೆ. ಮುಂಬಯಿಯನ್ನು ಅಪರಾಧ ಮುಕ್ತಗೊಳಿಸುವಲ್ಲಿ ನನ್ನ ಹೋರಾಟ ಮುಂದುವರಿಯಲಿದೆ.
-ದಯಾ ನಾಯಕ್, ಪೊಲೀಸ್ ಅಧಿಕಾರಿ