ಮುಂಬಯಿ: ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ನೇತೃತ್ವದ ತಂಡವು ಜೋಗೇಶ್ವರಿ ಪ್ರದೇಶದಲ್ಲಿ ಸುಮಾರು 60 ಲ. ರೂ. ಮೌಲ್ಯದ ಕನಿಷ್ಠ 3 ಕೆ.ಜಿ. ಮೆಫೆಡ್ರೋನ್ ಅಥವಾ ಮಿಯಾವ್ ಮಿಯಾವ್ (ಎಂಡಿಎಂಎ) ಡ್ರಗ್ಸ್‌ನೊಂದಿಗೆ ಈರ್ವರು ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತರನ್ನು ಅಹ್ಮದ್ ಹುಸೇನ್ ಮತ್ತು ಆಸಿಫ್ ಖುರೇಶಿ ಎಂದು ಗುರುತಿಸಲಾಗಿದ್ದು, ಈ ಮಾದಕ ಪದಾರ್ಥಗಳನ್ನು ಅವರು ಥರ್ಟಿ ಫಸ್ಟ್ ನೈಟ್ ಪಾರ್ಟಿಗಳಿಗೆ ಪೂರೈಕೆ ಮಾಡಲು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಪೊಲೀಸರು ಬಂಧಿತರ ಗ್ರಾಹಕರನ್ನು ಪತ್ತೆ ಮಾಡಲು ಅವರ ವಿಚಾರಣೆ ನಡೆಸುತ್ತಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು ನಗರದೊಳಗೆ ಭಾರೀ ಪ್ರಮಾಣದಲ್ಲಿ ಪಾರ್ಟಿ ಡ್ರಗ್ಸ್‌ಗಳನ್ನು ತರಿಸಲಾಗುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ತನಿಖಾ ಅಧಿಕಾರಿ ದಯಾ ನಾಯಕ್ ನೇತೃತ್ವದ ತಂಡವು ರವಿವಾರ ಬಲೆ ಬೀಸಿ ಈ ಈರ್ವರು ವ್ಯಕ್ತಿಗಳನ್ನು ಬಂಧಿಸಿದೆ.
ಪೊಲೀಸ್ ತಂಡವು ರಾತ್ರಿ ಜೋಗೇಶ್ವರಿ(ಪ)ಯಲ್ಲಿ ಬಲೆ ಬೀಸಿದಾಗ,ಅಲ್ಲಿ ಖುರೇಶಿ ವ್ಯಕ್ತಿಯೋರ್ವನಿಗಾಗಿ ಕಾಯುತ್ತಿರುವುದು ಕಂಡುಬಂತು. ತಂಡವು ಆತನ ಮೇಲೆ ನಿಗಾ ಇಟ್ಟಾಗ, ಓರ್ವ ದ್ವಿಚಕ್ರ ವಾಹನ ಸವಾರ (ಹುಸೇನ್) ಖುರೇಶಿ ಬಳಿಗೆ ಬಂದ. ಹುಸೇನ್ ಕೋಡ್ ವರ್ಡ್‌ನಲ್ಲಿ ಖುರೇಶಿಯೊಂದಿಗೆ ಡ್ರಗ್ಸ್ ಡೀಲ್ ಮಾಡುತ್ತಿದ್ದಾಗ, ಪೊಲೀಸ್ ತಂಡವು ಅವರನ್ನು ಬಂಧಿಸಿತು.
ಈ ಸಂದರ್ಭ ಖುರೇಶಿ ಬಳಿಯಿಂದ 3 ಕೆ.ಜಿ.ಪಾರ್ಟಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಆತನ ಪೂರೈಕೆದಾರನ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.