ಇವರು ಕ್ಲಾಸಿನಲ್ಲಿ ಮೆಲುದನಿಯ ಉಪನ್ಯಾಸಕಿ, ಪಿಎಚ್‌ಡಿ ವಿದ್ಯಾರ್ಥಿನಿ, ಮಹಿಳಾ ಯಕ್ಷಗಾನ ತಂಡದ ಸ್ಥಾಪಕಿ. ಅಷ್ಟೇ ಅಲ್ಲ ರಂಗದ ಮೇಲೆ ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ… ಹೀಗೆ ಬಹುಮುಖ ಪಾತ್ರ ನಿರ್ವಹಿಸುತ್ತಿರುವವರು ಉಷಾ ನಾಯಕ್…
ರಾತ್ರಿಯಿಡೀ ರಂಗದ ಮೇಲೆ ಆರ್ಭಟಿಸುತ್ತಾ, ಚಂಡೆ ಮದ್ದಳೆಯನ್ನು ಮೀರಿದ ದನಿಯಲ್ಲಿ ಭಾಗವತಿಕೆ ಹಾಡುತ್ತಾ ವಿಶಿಷ್ಟ ಲೋಕವನ್ನು ಸೃಷ್ಟಿಸುವ ಯಕ್ಷಗಾನದಲ್ಲಿ ಪುರುಷರಿಗೇ ಆದ್ಯತೆ ಹೆಚ್ಚು. ಆದರೆ, ಈ “ಗಂಡುಕಲೆ’ಯನ್ನು ಸಲೀಸಾಗಿ ನಿರ್ವಹಿಸುವ ಕಲಾವಿದೆ ಉಷಾ ನಾಯಕ್. ಕೇವಲ ಕಲಾವಿದೆಯಾಗಷ್ಟೇ ಅಲ್ಲ, ಮಹಿಳಾ ಯಕ್ಷತಂಡದ ಸ್ಥಾಪಕಿಯಾಗಿ ಇವರ ಕಲಾಸೇವೆ ಅನನ್ಯ.
ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ಉಷಾನಾಯಕ್‌ಗೆ ಯಕ್ಷಗಾನದ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಬಣ್ಣ ಹಚ್ಚಿದ ಇವರು ಮುಂದೆ ಗುಳ್ಮೆ ನಾರಾಯಣ ಪ್ರಭು, ಚೇರ್ಕಾಡಿ ಮಂಜುನಾಥ ಪ್ರಭು, ಕೆ.ಜೆ. ಗಣೇಶ್ ಅವರಿಂದ ಯಕ್ಷ ತರಬೇತಿ ಪಡೆದರು.
ಬಡಗುತಿಟ್ಟಿನಲ್ಲಿ ಉಷಾ ನಿರ್ವಹಿಸುವುದು ಪುರುಷ ಪಾತ್ರಗಳನ್ನೇ. ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ, ಚಿತ್ರ ಸೇನಾ, ವಿಷ್ಣು, ರುಕ್ಮ ಪಾತ್ರ ದಲ್ಲಿ ಬಳಿರೇ ಎನ್ನುವಂತೆ ಅಭಿನಯಿಸಿ ಪ್ರೇಕ್ಷ ಕರ ಮನಸ್ಸನ್ನು ಗೆದಿದ್ದಾರೆ. 2009ರಲ್ಲಿ 10 ಮಹಿಳೆಯರನ್ನು ಸೇರಿಸಿ ಬಡಗುತಿಟ್ಟಿನ “ಮಹಾಲಕ್ಷಿ ಮಹಿಳಾ ಯಕ್ಷ ಕಲಾ ಮಂಡಳಿ’ಯನ್ನು ಸ್ಥಾಪಿಸಿದರು.
ಈ ತಂಡ ಈಗಾಗಲೇ 9 ಪ್ರಸಂಗಗಳನ್ನು ಕಟ್ಟಿಕೊಡುತ್ತಿದೆ. ಪತಿ ಸುರೇಶ್ ನಾಯಕ್ ಹಾಗೂ ಮಕ್ಕಳಾದ ಗುರುಪ್ರಸಾದ್ ಮತ್ತು ರಕ್ಷಿತ್‌ರ ಬೆಂಬಲದಿಂದಾಗಿ ಇಷ್ಟನ್ನೆಲ್ಲ ಸಾಧಿಸಿದೆ ಎನ್ನುವ ಉಷಾ, ಪ್ರಸ್ತುತ ಪಿಎಚ್.ಡಿ ಅಧ್ಯಯನ ನಡೆಸುತ್ತಿದ್ದಾರೆ.
ಯಕ್ಷಗಾನವು ನನ್ನ ಮನಸ್ಸಿಗೆ ಖುಷಿ ಕೊಡುವ ಕಲೆ. ಈ ಗಂಡು ಕಲೆ ಯಾವತ್ತೂ ನನಗೆ ಕಷ್ಟವಾಗಿದ್ದೇ ಇಲ್ಲ. ಪುರುಷರ ಯಕ್ಷಗಾನದಂತೆ ಮಹಿಳಾ ಯಕ್ಷಕಲೆಯೂ ಅಪಾರ ಜನಪ್ರಿಯತೆ ಪಡೆಯುತ್ತಿದೆ. ಇನ್ನಷ್ಟು ಹೆಣ್ಮಕ್ಕಳು ಬಣ್ಣ ಹಚ್ಚಿ, ರಂಗಸ್ಥಳವನ್ನು ಏರಲಿ ಎನ್ನುವುದೇ ನನ್ನ ಆಸೆ.
-ಉಷಾ ನಾಯಕ್
* ವಿದ್ಯಾ ಕೆ. ಇರ್ವತ್ತೂರು