ಕೆ.ಆರ್.ನಗರ: ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ 15 ರಿಂದ 20 ಪಟ್ಟು ಹೆಚ್ಚು ಶುಲ್ಕವನ್ನು ಪಡೆಯಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರುದ್ರೇಶ್ ಮತ್ತು ಸದಸ್ಯರು ಇಲ್ಲಿನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು. ಕೇಂದ್ರ ಪಠ್ಯಕ್ರಮದ ನೆಪ ಹೇಳಿ ದುಬಾರಿ ಶುಲ್ಕ ಸ್ವೀಕರಿಸುತ್ತಿರುವ ಸೇಂಟ್ ಜೋಸೆಫ್ ಕಾನ್ವೆಂಟ್ ಸುಮಾರು 18 ಸಾವಿರ ರೂ. ವಸೂಲಿ ಮಾಡುತ್ತಿದೆ.
ಅಲ್ಲದೇ ಒಂದು ಕೊಠಡಿಯಲ್ಲಿ 40 ಮಕ್ಕಳಿಗೆ ಅವಕಾಶವಿದ್ದರೂ 90 ರಿಂದ 100 ಮಕ್ಕಳನ್ನು ತುಂಬಿ, ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗುವಂತೆ ಮಾಡುತ್ತಿದೆ. ವಾಸವಿ ಸೆಂಟ್ರಲ್ ಸ್ಕೂಲು ಕೇವಲ ಆಂಗ್ಲ ಮಾಧ್ಯಮ ಮಾತ್ರ ಅನುಮತಿ ಇದ್ದು, ಆ ಶಾಲೆಗೆ ಕೇಂದ್ರ ಅನುಮತಿ ಇದೆ ಎಂದು ಸುಳ್ಳು ನೆಪ ಹೇಳಿ 35 ಸಾವಿರದಿಂದ 70ರವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ನಿಗದಿಪಡಿಸಿರುವಂತೆ 600 ರೂ.ಗಳಿಂದ 2500 ರೂ. ವರೆಗೆ ಮಾತ್ರ ಶುಲ್ಕ ಪಡೆಯಬಹುದಾಗಿದೆ ಎಂದು ಮಾಹಿತಿ ಇದೆ. ಆದರೆ ಆರಂಭಿಕ ಶುಲ್ಕದಲ್ಲಿ ಅಭಿವೃದ್ಧಿ ನೆಪ ಒಡ್ಡಿ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಇಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಅರ್ಪಿಸಿದರಲ್ಲದೆ, ಪತ್ರಿಕಾಗೋಷ್ಠಿಯ ಮೂಲಕ ಪೋಷಕರಿಗೆ ಮಾಹಿತಿ ನೀಡಬೇಕು.
ಇಲ್ಲದಿದ್ದರೆ ಪೋಷಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ 3 ದಿನಗಳೊಳಗೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.