ಬೆಂಗಳೂರು: ಇದೇ ಫೆ.11ರಂದು ನಗರದಲ್ಲಿ ನಡೆಯುವ ವಿರಳ ಸಂಚಾರ ದಿನದಂದು ಬಿಎಂಟಿಸಿಯ ದಿನದ ಪಾಸುಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಫೆ.11ರಂದು ಸಮೂಹ ಸಾರಿಗೆ ಬಳಸುವಂತೆ ಸಾರ್ವಜನಿಕರನ್ನು ಆಕರ್ಷಿಸಲು ದಿನದ ಪಾಸುಗಳನ್ನು ರಿಯಾಯ್ತಿ ದರದಲ್ಲಿ ನೀಡಲಿದ್ದು, ಈ ದರ ಸಾಮಾನ್ಯ ಮತ್ತು ವೋಲ್ವೊ ಎರಡೂ ಪ್ರಕಾರದ ಬಸ್‌ಗಳ ದಿನದ ಪಾಸುಗಳಿಗೂ ಅನ್ವಯ ಆಗಲಿದೆ.
ಆದರೆ, ಎಷ್ಟು ರಿಯಾಯ್ತಿ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು. ಪ್ರಸ್ತುತ ದಿನದ ಪಾಸು ಸಾಮಾನ್ಯ ಬಸ್‌ಗಳಲ್ಲಿ 65 ರೂ. (ಐಡಿ ಕಾರ್ಡ್‌ಸಹಿತ) ಹಾಗೂ 70 ರೂ. (ಐಡಿ ಕಾರ್ಡ್‌ರಹಿತ) ಹಾಗೂ ವೋಲ್ವೊದಲ್ಲಿ (ವಾಯುವಜ್ರ ಹೊರತುಪಡಿಸಿ) 140 ರೂ. ಇದೆ. ಬಸ್‌ಗಳ ಸೇವೆ ಕೂಡ ಎಂದಿಗಿಂತ ಆ ದಿನ ಹೆಚ್ಚು ಇರಲಿದೆ.
“ನಮ್ಮ ಮೆಟ್ರೋ’ ಕೂಡ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದು, ಒಂದು ದಿನದ ಮಟ್ಟಿಗೆ ಪ್ರಯಾಣ ದರ ಇಳಿಸಲು ಮನವಿ ಮಾಡಿದ್ದೇವೆ ಎಂದರು. ಪವರ್ ಸ್ಟಾರ್ ಸಾಥ್ ವಿರಳ ಸಂಚಾರ ದಿನ ಆಚರಣೆಗೆ ಈಗಾಗಲೇ ನಟ ಯಶ್ ರಾಯಭಾರಿಯಾಗಿದ್ದಾರೆ. ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ.
ಅಲ್ಲದೆ, ನಿರ್ದೇಶಕ ಯೋಗರಾಜ್ ಭಟ್ ಕವನ ಕೂಡ ರಚಿಸಲಿದ್ದಾರೆ. ಮೇಯರ್ ಕೂಡ ಪುರಪಿತೃಗಳೊಂದಿಗೆ ಸಭೆ ನಡೆಸಿ, ಒಪ್ಪಿಗೆ ಸೂಚಿಸಿದ್ದಾರೆ. ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು, ಸರ್ಕಾರೇತರ ಸಂಘ-ಸಂಸ್ಥೆಗಳೂ ಕೈಜೋಡಿಸಿವೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಎರಡನೇ ಭಾನುವಾರ ಇದು ಆಚರಣೆಗೆ ಬರಲಿದೆ.
ನಗರದಲ್ಲಿ 56 ಲಕ್ಷ ಖಾಸಗಿ ವಾಹನಗಳಿವೆ. ಒಂದು ದಿನದ ಮಟ್ಟಿಗೆ ಈ ವಾಹನಗಳು ರಸ್ತೆಗಿಳಿಯದಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ. ಇಂಧನ ಉಳಿತಾಯ ಆಗಲಿದೆ. ಸರ್ಕಾರದ ಈ ಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸ ಇದೆ ಎಂದು ಸಚಿವ ರೇವಣ್ಣ ಹೇಳಿದರು.