Advertisement
ಅಂದು ಅವಳ ಲೇಖನವೊಂದು ರಾಜ್ಯದ ಹೆಸರಾಂತ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.ಸ್ನೇಹಿತರು- ಪರಿಚಯದವರೆಲ್ಲಾ ಅದನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ಅವಳ ಮನಸ್ಸು ಮಾತ್ರ ಗಂಡನ ಹೊಗಳಿಕೆಯ ಮಾತುಗಳಿಗಾಗಿ ಕಾಯುತ್ತಿತ್ತು. ಅವನು ಆಫೀಸಿಗೆ ಹೋಗುವ ತರಾತುರಿಯಲ್ಲಿದ್ದ. ಒಂದು ಕೈಯಲ್ಲಿ ತಿಂಡಿ, ಇನ್ನೊಂದು ಕೈಯಲ್ಲಿ ಪೇಪರ್ ಹಿಡಿದು, ಗಂಡನಿಗೆ ಅತ್ಯಂತ ಖುಷಿಯಿಂದ ವಿಷಯ ತಿಳಿಸಿದಳು. ಓ, ಹೌದಾ. ಸಂಜೆ ಬಂದು ಓದುತ್ತೇನೆ ಎಂದವನು, ತಿಂಡಿ ತಿಂದು ಪೇಪರನ್ನು ದೂರ ಸರಿಸಿ ಹೊರಟೇಹೋದ. ಸ್ವಲ್ಪ ಅಸಮಾಧಾನವಾದರೂ, ಸಂಜೆ ಓದುತ್ತಾರಲ್ಲ ಬಿಡು ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡು ಮುಂದಿನ ಕೆಲಸಕ್ಕೆ ಅಣಿಯಾದಳು. ಸಂಜೆ ಬಂದಾಗಲೂ ಹೆಂಡತಿಯ ಬರಹ ನೋಡುವುದನ್ನು ಮರೆತು, ಮೊಬೈಲಲ್ಲಿ ಮುಳುಗಿಹೋದ. ಆ ದಿನ ಕಳೆದರೂ ಆ ಪತ್ರಿಕೆಯನ್ನು ಆತ ಓದಲೇ ಇಲ್ಲ. ಗಂಡನನ್ನು ತಾನು ಪ್ರೀತಿಸುವ ಬಗೆಯನ್ನು ಎಳೆಎಳೆಯಾಗಿ ವಿವರಿಸಿದ್ದ ಬರಹ ಅದು. ಅದನ್ನು ತನ್ನ ಪ್ರೀತಿಪಾತ್ರನೇ ಓದದಿದ್ದಾಗ ಅವಳಿಗೆ ಬಹಳ ಬೇಸರವೆನಿಸಿತ್ತು. ಚಿಕ್ಕ ಹುಡುಗಿಯಾಗಿದ್ದಾಗ ಅವಳು ಬಿಡಿಸಿದ ಬಣ್ಣಬಣ್ಣದ ಚಿತ್ರ ಪೇಪರಿನಲ್ಲಿ ಬಂತೆಂದು, 10-12 ಪೇಪರ್‌ಖರೀದಿಸಿ ಅವನ್ನು ಕಂಕುಳಲ್ಲಿ ಇಟ್ಟುಕೊಂಡು, ನನ್ನ ಮಗಳ ಹೆಸರು ಪೇಪರಿನಲ್ಲಿ ಬಂದಿದೆಯೆಂದು ಊರೆಲ್ಲಾ ಸಾರಿ ಖುಷಿಪಟ್ಟಿದ್ದ ಅಪ್ಪನ ನೆನಪಾಗಿ, ಅವಳು ಮಲಗಿದಲ್ಲೇ ಕಣ್ಣೀರಾಗಿದ್ದಳು.
Related Articles
Advertisement
ಅಂದು ಮನೆಯಲ್ಲಿ ಹಬ್ಬದ ಸಂಭ್ರಮ. ಅವಳು ನಸುಕಿನಲ್ಲೇ ಎದ್ದು, ಮನೆ ಗುಡಿಸಿ, ಅಂಗಳ ಸಿಂಗರಿಸಿ, ನೆಲ ಒರೆಸಿ, ಸ್ನಾನ, ಪೂಜೆ, ಹಬ್ಬದ ಅಡುಗೆ ಎಲ್ಲಾ ಮಾಡಿ ಗಂಡ ಮಕ್ಕಳನ್ನು ಎಬ್ಬಿಸಿದಳು. ಬೇಳೆ ಹೋಳಿಗೆ, ಪೂರಿ, ಕುರ್ಮ, ಅನ್ನ, ತರಕಾರಿ ಸಾರು… ಇಷ್ಟೆಲ್ಲಾ ಮಾಡಿ ಮುಗಿಸಿದ್ದಳು 10 ಗಂಟೆಯೊಳಗೆ. ಅವಳ ಶ್ರಮ, ಪ್ರೀತಿ ತುಂಬಿದ ಅಡುಗೆಯ ರುಚಿಯನ್ನು ಅವಳ ಗಂಡ ಹೊಗಳಿದರೆ ಸಾಕು, ಊಟದ ಮೊದಲೇ ಹೊಟ್ಟೆ ತುಂಬಿ ಶ್ರಮವೆಲ್ಲ ಕಳೆದುಹೋಗುತ್ತಿತ್ತು ಅವಳಿಗೆ. ಆದರವನು ಊಟ ಮಾಡಿ, ಕೈ ತೊಳೆದುಕೊಂಡು ಏನೂ ವಿಶೇಷವೇ ಇಲ್ಲವೆಂಬಂತೆ ಎದ್ದು ಹೊರಟುಹೋದ. ತವರು ಮನೆಯಲ್ಲಿದ್ದಾಗ ಇವಳು ಮಾಡುತ್ತಿದ್ದ ಪ್ರತಿಯೊಂದು ಹೊಸರುಚಿಯನ್ನು ಮೊದಲು ಟೇಸ್ಟ್ ನೋಡುತ್ತಿದ್ದವನೇ ಅಣ್ಣ. ತಂಗಿ ಮಾಡಿದ ತಿನಿಸು ಹೇಗೇ ಇದ್ದರೂ, ‘ಆಹಾ, ತುಂಬಾ ತುಂಬಾ ಚೆನ್ನಾಗಿದೆ’ ಎಂದು ಹೊಗಳುತ್ತಿದ್ದ. ಅದರ ಫೋಟೋ ತೆಗೆದು, ತಂಗಿ ಮಾಡಿದ್ದು ಅಂತ ಸ್ಟೇಟಸ್ ಹಾಕುತ್ತಿದ್ದ. ಹೆತ್ತವರಂತೂ ಅದರ ರುಚಿಯ ಬಗ್ಗೆ ಚಕಾರ ಎತ್ತದೆ, ಚಪ್ಪರಿಸಿಕೊಂಡು ತಿಂದು ಖುಷಿಪಡುತ್ತಿದ್ದರು. ಅಮ್ಮ, ಅಪ್ಪ, ಅಣ್ಣನ ಪೋ›ತ್ಸಾಹ ನೆನಪಾಗಿ ಕಣ್ಣಾಲಿ ತುಂಬುತ್ತಿದ್ದರೂ, ಹಬ್ಬದ ದಿನ ಕಣ್ಣೀರು ಹಾಕಬಾರದೆಂದು ತನಗೆ ತಾನೇ ಸಾಂತ್ವನ ಹೇಳಿಕೊಂಡು ಈಕೆ ಮುಂದಿನ ಕೆಲಸಕ್ಕೆ ಅಣಿಯಾದಳು.
ದಿನದ ಮೂರು ಹೊತ್ತೂ ಒಲೆಯ ಮುಂದೆ ನಿಂತು ಬಗೆಬಗೆಯ ಅಡುಗೆ ಮಾಡಿ ಬಡಿಸುವ ಹೆಣ್ಣಿಗೆ, ಅಡುಗೆ ತುಂಬಾ ಚೆನ್ನಾಗಿದೆ ಎಂಬ ಎರಡು ಮಾತು ಚಿನ್ನದ ಪದಕ ಗೆದ್ದಷ್ಟೇ ಖುಷಿ ಕೊಡುತ್ತದೆ. ನಿಜ! ಅವಳು ಮಾಡುವ ದೈನಂದಿನ ಕೆಲಸಗಳು ಯಾರನ್ನೂ ಮೆಚ್ಚಿಸಲು ಅಲ್ಲ,ಅವಳ ಸಂಸಾರಕ್ಕಾಗಿಯೇ. ಆದರೆ, ಅವಳು ಯಂತ್ರವಲ್ಲ. ಅವಳಿಗೂ ಮನಸ್ಸಿದೆ. ಅವಳು ಮಾಡುವಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಅವಳಿಗೆ ಖುಷಿಪಡಿಸುವುದು ಪ್ರತಿ ಗಂಡನ ಕರ್ತವ್ಯವಲ್ಲವೇ? ಓ! ಹೆಣ್ಣು ತಾನು ಮಾಡುವ ಕೆಲಸಗಳಿಗೆಲ್ಲಾ ಗಂಡನ ಹೊಗಳಿಕೆಯ ನಿರೀಕ್ಷೆಯಿಡಬಾರದು ಎನ್ನುತ್ತೀರಾ? ಅವಳು ಯಾರೋ ಅಪರಿಚಿತರಿಂದ ಮೆಚ್ಚುಗೆಬಯಸುವುದಿಲ್ಲವಲ್ಲ, ಅವಳ ಪ್ರೀತಿ ಪಾತ್ರರ ಪ್ರೀತಿ ತುಂಬಿದ ಹೊಗಳಿಕೆಯನ್ನಷ್ಟೇ ಅವಳು ಬಯಸುತ್ತಾಳೆ. ಒಂದುಮೆಚ್ಚುಗೆಯ ಮಾತಿಂದ ಅವಳ ಹುಮ್ಮಸ್ಸು ಹೆಚ್ಚುತ್ತದೆ. ಕೆಲಸ ಮಾಡಿ ಸೋತ ಕೈಗಳಿಗೆ ಹೊಸ ಚೈತನ್ಯ ಬರುತ್ತದೆ. ಆಯಾಸಕಳೆದು ಮತ್ತಷ್ಟು ಜೋಶ್ ಮೂಡುತ್ತದೆ. ಹೆಣ್ಣು, ಗಂಡನಮನೆಯಲ್ಲಿ ಕೆಲಸ ಮಾಡಲೆಂದೇ ಇರುವ ಯಂತ್ರವಲ್ಲ.ಮನಸ್ಸು, ಭಾವನೆಗಳಿರುವ ಪ್ರೀತಿ, ಕಾಳಜಿ, ಮಮತೆ ತುಂಬಿದ ಗಣಿ. ಅವಳು, ಮನೆಯ ಮಹಾಲಕ್ಷ್ಮೀ. ಅವಳ ಮುಖದಲ್ಲಿ ಸದಾ ಮಂದಹಾಸವಿದ್ದರೆ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ತುಂಬಿರುತ್ತದೆ.
-ಸೌಮ್ಯಶ್ರೀ ಸುದರ್ಶನ ಹಿರೇಮಠ