ಹೊನ್ನಾವರ: ಜನ ಕಾಡಿಗೆ ಹೋಗಿ ಅತಿಕ್ರಮಣ ಮಾಡಿ ಕುಟುಂಬ ವಿಸ್ತರಿಸಿಕೊಂಳ್ಳುತ್ತಿದ್ದಂತೆ ಕಾಡಿನಲ್ಲಿದ್ದ ಮಂಗ, ಹಂದಿಗಳು ಪೇಟೆಗೆ ಬಂದು ತಮ್ಮ ಕುಟುಂಬ ವಿಸ್ತರಿಸಿಕೊಂಡಿವೆ. ಇವುಗಳನ್ನು ಕೊಲ್ಲುವುದು ಅಪರಾಧವೆಂಬ ಕಾನೂನು ಇರುವುದರಿಂದ ಇವುಗಳ ಸಂಖ್ಯೆ ಹೆಚ್ಚಿ ವರ್ತನೆ ಅಂಕೆ ಮೀರಿದೆ.
ನಗರದ ಹೊರವಲಯದ ಮರಗಳ ಮೇಲೆ ವಾಸ್ತವ್ಯ ಮಾಡುವ ಮಂಗಗಳು ದೂರವಾಣಿ, ಟಿವಿ ಕೇಬಲ್ ಗಳ ಮೇಲೆ ನಡೆಯುತ್ತಾ ತೆಂಗಿನ ಮರ ಕಂಡಲ್ಲಿ ಏರಿ ಕುಳಿತು ಬೆಳೆದ, ಎಳೆಯ ಕಾಯಿಗಳನ್ನು ಕಿತ್ತು ಅರೆಬರೆ ತಿಂದು ಎಸೆಯುತ್ತವೆ. ಗರ್ನಲ್ ಹೊಡೆದರೆ, ನಾಯಿ ಬಿಟ್ಟರೆ ಹೆದರುವುದಿಲ್ಲ. ಬಂದೂಕು ಕಂಡರೆ ತೆಂಗಿನ ಗರಿಯ ಮಧ್ಯೆ ಕೂರುತ್ತವೆ. ಹಳ್ಳಿಗಳಲ್ಲಿ ಇವುಗಳ ಕಾಟ ತಡೆಯಲಾರದೆ ಕೊಲ್ಲಿಸಿದವರಿದ್ದಾರೆ. ಹಿಡಿಸಿ ದೂರ ಬಿಟ್ಟವರಿದ್ದಾರೆ. ಯಾವುದೂ ಪರಿಣಾಮಕಾರಿಯಾಗಿಲ್ಲ. ಮಂಗ ಬಿಟ್ಟು ಉಳಿದದ್ದು ನಮಗೆ ಎಂದು ಸುಮ್ಮನಿದ್ದಾರೆ. ಪೇಟೆಗೆ ಬಂದ ಮನುಷ್ಯನಂತೆ ಪೇಟೆಗೆ ಬಂದ ಮಂಗಗಳು ಕಾಡಿಗೆ ಹೋಗುವುದಿಲ್ಲ.
ಗುಡ್ಡ, ಬೆಟ್ಟ ಅಲೆದಾಡುತ್ತಾ ಗಡ್ಡೆ, ಗೆಣಸು, ತೆಂಗಿನ ಸಸಿ ತಿಂದು ಹೊಟ್ಟೆ ತುಂಬಿಕೊಳ್ಳುತ್ತಿದ್ದ ಕಾಡು ಹಂದಿಗಳಿಗೆ ಗಡ್ಡೆ, ಗೆಣಸು ಸಿಗುತ್ತಿಲ್ಲ, ತೆಂಗಿನ ಸಸಿಯನ್ನು ಹೇಗೋ ರೈತರು ರಕ್ಷಿಸುತ್ತಾರೆ. ಆದ್ದರಿಂದ ಪೇಟೆಗೆ ಬಂದಿವೆ. ಊರ ಜನ ತ್ಯಾಜ್ಯ ಎಸೆಯಬಾರದು ಎಂದು ಉಚಿತವಾಗಿ ಪ.ಪಂ ಎರಡು ಬಕೇಟ್ ಕೊಟ್ಟಿದೆ, ನಿತ್ಯ ವಾಹನ ಕಳಿಸುತ್ತದೆ. ಆದರೂ ಜನ ತ್ಯಾಜ್ಯವನ್ನು ಬೆಳಗಿನ ಜಾವ ರಸ್ತೆಗೆ ಎಸೆಯುವುದನ್ನು ಬಿಟ್ಟಿಲ್ಲ. ಬಕೇಟನ್ನು ಬಟ್ಟೆತೊಳೆಯಲು ಬಳಸುತ್ತಾರೆ. ಬೈಕ್, ಕಾರು, ಹೊಟೇಲ, ಗೂಡಂಗಡಿ ಇದ್ದವರು ತ್ಯಾಜ್ಯವನ್ನು ಚೀಲ ತುಂಬಿ ಹೆದ್ದಾರಿಯ ಅಕ್ಕಪಕ್ಕಕ್ಕೆ ಎಸೆದು ಯಾರು ಕಂಡರೋ ಎಂದು ಹಿಂದೆಮುಂದೆ ನೋಡಿ ಹೊರಟು ಹೋಗುತ್ತಾರೆ. ಇದು ಕಾಡು ಹಂದಿಗಳಿಗೆ ಸಮೃದ್ಧ ಆಹಾರವಾಗಿದೆ. ಪ್ರಭಾತನಗರದಿಂದ ಆರಂಭವಾಗಿ ಬಂದರದವರೆಗೆ ಬೆಳಗಿನಜಾವ ಹಂದಿಗಳ ದರ್ಬಾರು. ಒಂಟಿಯಾಗಿ, ಗುಂಪಾಗಿ, ಮರಿಗಳೊಂದಿಗೆ ಓಡಾಡುವ ಹಂದಿಗಳು ಮುಂಜಾನೆ ವಾಕಿಂಗ್‌ಗೆ ಹೋಗುವವರ ಮೈಮೇಲೆ ಎರಗುವ ಸಂಭವ ಇದೆ. ಆರೊಳ್ಳಿ ತಿರುವಿನಲ್ಲಿ ಚಿರತೆಯನ್ನು ಕಂಡಿರುವುದಾಗಿ ವಾಹನ ಚಾಲಕರೊಬ್ಬರು ಹೇಳಿದ್ದು ನಸುಕಿನಲ್ಲಿ ಓಡಾಡುವವರನ್ನು ಎಚ್ಚರಿಸಿದ್ದಾರೆ. ಇವುಗಳ ಕಾಟದಿಂದ ಹಳ್ಳಿಗಳಲ್ಲಿ ಅಡಕೆ, ತೆಂಗು, ಭತ್ತ, ಕಬ್ಬು, ತರಕಾರಿ, ಹಣ್ಣ-ಹಂಪಲು ಯಾವುದನ್ನು ಬೆಳೆದರೂ ಪೂರ್ತಿ ರೈತನ ಕೈ ಸೇರುವುದಿಲ್ಲ. ಸರ್ಕಾರವು ಕಾಡು ಪ್ರಾಣಿಗಳ ಪರವಾಗಿದೆ. ಇವುಗಳ ಸಂತತಿ ಹೀಗೆ ಬೆಳೆದರೆ ಬದುಕುವುದು ಕಷ್ಟವಾಗಲಿದೆ.
ಅರಣ್ಯ ಇಲಾಖೆ ಹಾನಿಗೆ ಪರಿಹಾರ ಕೊಡುತ್ತದೆಯೇ ವಿನಃ ಶಾಶ್ವತ ಪರಿಹಾರ ಹುಡುಕುವುದಿಲ್ಲ. ರೈತರ ಈ ಕಷ್ಟವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಗಮನ ಸೆಳೆದಾಗ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಧ್ವನಿ, ಬೆಳಕು ಪ್ರಯೋಗಿಸಿ ಪ್ರಾಣಿಗಳನ್ನು ಕಾಡಿಗೆ ಕಳಿಸುವಂತ ಉಪಕರಣ ಶೋಧಿಸಲು ತಮ್ಮ ಇಂಜಿನಿಯರಿಂಗ್ ಕಾಲೇಜುಗಳಿಗೆ ಆದೇಶ ನೀಡಿದ್ದಾರೆ. ಇದೊಂದು ಆಶಾದಾಯಕ ಸಂಗತಿ.
ಜೀಯು, ಹೊನ್ನಾವರ