ಕೋಲ್ಕತಾ: ಮುಂದಿನ ವರ್ಷಾರಂಭದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ಅಹ್ಮದಾಬಾದ್‌ನಲ್ಲಿ ಡೇ ನೈಟ್ ಟೆಸ್ಟ್ ಪಂದ್ಯವನ್ನು ಆಡಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಅವರು ಕೋಲ್ಕತಾ ಪ್ರಸ್ ಕ್ಲಬ್ ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಈ ವಿಷಯ ತಿಳಿಸಿದರು.
ಕೊರೊನಾದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಂಡಿದ್ದರಿಂದ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಬಗ್ಗೆ ಸಹಜವಾಗಿಯೇ ಅನುಮಾನವಿದೆ. ಆದರೆ ಗಂಗೂಲಿ ಇಂಥದೊಂದು ಸಾಧ್ಯತೆಯನ್ನು ತಳ್ಳಿಹಾಕಿದರು. ಇಂಗ್ಲೆಂಡ್ ತಂಡ ಜನವರಿ ಮಾರ್ಚ್ ಅವಧಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಮತ್ತು ಸೀಮಿತ ಓವರ್ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
“ಈ ಸರಣಿಗಾಗಿ ನಾವು ನಾನಾ ಸುರಕ್ಷಾ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಆದರೆ ಇನ್ನೂ 4 ತಿಂಗಳಿರುವುದರಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಹ್ಮದಾಬಾದ್‌ನಲ್ಲಿ ಹಗಲು ರಾತ್ರಿ ಟೆಸ್ಟ್ ನಡೆಯಲಿದೆ’ ಎಂದು ಗಂಗೂಲಿ ಹೇಳಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯ ಪ್ರವಾಸದ ಬಗ್ಗೆ ಯೋಚಿಸಬೇಕಿದೆ. ಹಾಗೆಯೇ ಮುಂದಿನ ಸಭೆಯಲ್ಲಿ ರಣಜಿ ಟ್ರೋಫಿ ಆಯೋಜನೆ ಕುರಿತು ಅಂತಿಮ ನಿರ್ಧಾರಕ್ಕೆ ಬರಬೇಕಿದೆ ಎಂದರು