ಬರ್ತಾ ಇದ್ದಾರೆ, ಹೊರಟೇ ಬಿಟ್ರಾ, ಬಂದೇ ಬಿಟ್ರಾ … ಹೀಗೆ ಚಿತ್ರತಂಡದವರು ಆಗಾಗ್ಗೆ ಹೇಳುತ್ತಲೇ ಇದ್ದರು. ಆದರೆ, ಸುದೀಪ್ ಬರಲಿಲ್ಲ. ಚಿತ್ರತಂಡದವರು ಕಾಯುವುದು, ಕಾಯಿಸುವುದು ಬಿಡಲಿಲ್ಲ. ಕೊನೆಗೆ 12ರ ನಂತರ ಕೊನೆಗೂ ಸುದೀಪ್ ಕಾರಿನಿಂದ ಇಳಿದರು. ಅಲ್ಲಿಯವರೆಗೂ ಅರ್ಧ ತುಂಬಿದ್ದ ಸಭಾಂಗಣ ತುಂಬಿ ಹೋಯಿತು. ಮಾತು, ಹಾಡು, ಚಪ್ಪಾಳೆ, ಫೋಟೋ … ಎಲ್ಲವೂ ಸಾಂಗವಾಗಿ ಮುಗಿಯಿತು.
ಇದು “ಶಂಖನಾದ’ ಚಿತ್ರದ ಹಾಡುಗಳ ಸಮಾರಂಭದ ವರದಿ. ಸಣ್ಣ ಕವನಗಳನ್ನು ಬರೆದು, ಇದುವರೆಗೂ ಕೆಲವು ಚಿತ್ರಗಳ ಸಹ ನಿರ್ದೇಶನ ಮಾಡಿದ ಅನುಭವ ಇರುವ ವಿಶ್ವನಾಥ ಬಸಪ್ಪ ಕಾಳಗಿ ನಿರ್ದೇಶಿಸಿರುವ “ಶಂಖನಾದ’ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ವಿಶ್ವನಾಥ ಅವರೇ ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ವಿಜಯ ರೆಡ್ಡಿ ಚೌಧರಿ ಎನ್ನುವವರು ಈ ಚಿತ್ರವನ್ನು ನಿರ್ಮಿಸಿದ್ದು ಶಾಂತರೆಡ್ಡಿ ನಾಗಣ್ಣಗೌಡ ಪಾಟೀಲ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ನಾಯಕಿಯರಾಗಿ ನಯನ ಮತ್ತು ರಶ್ಮಿತಾ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಹಾರೈಸಿ ಮಾತನಾಡಿದ ಸುದೀಪ್, “ಒಂದು ಚಿತ್ರ ನೂರು ದಿನ ಪ್ರದರ್ಶನ ಕಂಡರೆ ಅದನ್ನು ಹಿಟ್ ಅಂತ ಹೇಳಲು ಬರುವುದಿಲ್ಲ. ಜನ ಮೆಚ್ಚಿದರೆ ಮಾತ್ರ ಅದೊಂದು ಯಶಸ್ಸು ಎಂದು ಕರೆಯಬಹುದು. ಈ ಚಿತ್ರತಂಡದಲ್ಲಿ ಮುಗ್ಧತೆ ಕಾಣುತ್ತಿದೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದರು.
ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದೆ “ಶಂಖನಾದ’ ಚಿತ್ರದ ಅರವಿಂದ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. “ಆಗ ನನಗೆ “ಶಂಖನಾದ’ ಚಿತ್ರದಲ್ಲಿ ದಾಸಯ್ಯನ ಪಾತ್ರ ನೀಡಿದಾಗ ಬೇಸರವಾಗಿತ್ತು. ಅಲ್ಲದೆ ಬೈಗುಳದ ಸಂಭಾಷಣೆಗಳನ್ನು ಹೇಳುವಾಗ ಇಂತಹ ಚಿತ್ರವನ್ನು ಜನ ನೋಡುತ್ತಾರಾ ಎಂಬ ಗೊಂದಲವೂ ಇತ್ತು.
ಮುಂದೆ ಚಿತ್ರ ಯಶಸ್ವಿಯಾಗಿದ್ದಷ್ಟೇ ಅಲ್ಲ, ಪ್ರಶಸ್ತಿ ಬಂದು “ಶಂಖನಾದ’ ಅರವಿಂದ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದೇನೆ’ ಎಂದು ಹೇಳುತ್ತಾರೆ. ಅಂದು ಶಾಸಕ ರಾಜು ಗೌಡ ಸಹ ಬಂದಿದ್ದರು. “ನಾವು ಉತ್ತರ ಕರ್ನಾಟಕದವರು ಸಿನಿಮಾ ಮಾಡುವುದು ಕಡಿಮೆ, ನೋಡುವುದು ಜಾಸ್ತಿ. ಈ ತಂಡವು ನಮ್ಮ ಭಾಗದಿಂದ ಬಂದವರಾಗಿದ್ದಾರೆ. ಈ ಚಿತ್ರತಂಡದವರಿಗೆ ಒಳ್ಳೆಯದಾಗಲೀ’ ಎಂದು ಹಾರೈಸಿದರು.