ಆಳಂದ: ಉದ್ಯೋಗ ಖಾತ್ರಿ ಕಾಮಗಾರಿ ನೀಡಬೇಕು, ಹಳೆ ಕೂಲಿ ಪಾವತಿಸಬೇಕು. ಪ್ರತಿ ತಿಂಗಳು ನೂರು ರೂ.ಗಳನ್ನು ಅಕ್ರಮ ಪಡೆಯುವುದು ನಿಲ್ಲಿಸಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕೂಲಿಕಾರರ ಯೂನಿಯನ್ ಮತ್ತು ಅಖೀಲ ಭಾರತ ಕಿಸಾನಸಭಾ ತಾಲೂಕು ಘಟಕದ ಆಶ್ರಯದಲ್ಲಿ ಕಾರ್ಮಿಕರು ರುದ್ರವಾಡಿ ಗ್ರಾಪಂ ಕಚೇರಿ ಎದುರು ದಿನವಿಡಿ ಪ್ರತಿಭಟನೆ ನಡೆಸಿದರು.
ನಿರಂತರವಾಗಿ ಸುರಿದ ಮಳೆಯಿಂದ ದನಗಳು ಹಾಗೂ ಕುರಿಗಳಿಗೆ ಆಶ್ರಯವಿಲ್ಲದೇ ರೋಗ ಹರಡಿ ಮೃತಪಡುತ್ತಿವೆ. ಆಶ್ರಯ ಒದಗಿಸಲು ರೈತರಿಗೆ ಆರ್ಥಿಕ ತೊಂದರೆ ಕಾಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ದುಡಿದ ಕೂಲಿ ನೀಡಿ. ಜಾಬ್ ಕಾರ್ಡ್‌ಗಳನ್ನು ಅಧಿಕಾರಿಗಳು ಮರಳಿಕೊಡಬೇಕು. ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಸದ್ಯ ಉದ್ಯೋಗ ಖಾತ್ರಿ ಅಡಿಯಲ್ಲಿ ದನದ ಕೊಟ್ಟಿಗೆ, ಕುರಿದೊಡ್ಡಿ ಕಾಮಗಾರಿ ಪ್ರಾರಂಭಿಸಿದರೆ ಗ್ರಾಮದಲ್ಲಿದ್ದ ಕೂಲಿಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ವಲಸೆ ಹೋಗುವುದು ತಪ್ಪುತ್ತದೆ. ಅಲ್ಲದೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಚೇರಿಗೆ ಬಾರದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸ್ಥಳಕ್ಕೆ ಬಂದು ಬೇಡಿಕೆ ಆಲಿಸಬೇಕು. ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಕಿಸಾನಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ವಸವಂತರಾಯ ಕೊಟ್ಟರಗಿ, ಲಕ್ಷ್ಮೀಬಾಯಿ ವಗ್ಗೆ ಮಾತನಾಡಿದರು.
ಮಹ್ಮದ್‌ರಫಿ ಮಾಸುಲ್ದಾರ, ಅಫಸರ್‌ಮಿಯಾ ಶೇಖ, ಗಂಗಾಧರ ಬಿರಾದಾರ, ಪರುತ್ ಕಲಶೆಟ್ಟಿ, ರಾಮಚಂದ್ರ ಕಾಬರಾರಿ, ಶಾಂತಪ್ಪ ಮಲಕಣ್ಣಾ, ಮಲ್ಲಮ್ಮಾ ಬಿರಾದಾರ, ಮಾರ್ತಂಡ ವಗ್ಗೆ ಹಾಗೂ ಇನ್ನಿತರ ಕಾರ್ಮಿಕರು ಭಾಗವಹಿಸಿದ್ದರು.