Advertisement

D.K.ಇನ್ನೂ ಆರಂಭಗೊಳ್ಳದ ಡೇ ಕೇರ್‌ ಸೆಂಟರ್‌! ಟೆಂಡರ್‌ ಹಂತದಲ್ಲಿ ಎನ್‌ಜಿಒ ಆಯ್ಕೆ

11:38 PM Nov 21, 2023 | Team Udayavani |

ಬಂಟ್ವಾಳ: ಎಂಡೋ ಸಲ್ಫಾನ್‌ ಸಂತ್ರಸ್ತರ ಆರೈಕೆಯ ದೃಷ್ಟಿಯಿಂದ ದ.ಕ.ಜಿಲ್ಲೆಗೆ ಮಂಜೂರಾಗಿರುವ 4 ಹೆಚ್ಚುವರಿ ಪಾಲನಾ ಕೇಂದ್ರ (ಡೇ ಕೇರ್‌ ಸೆಂಟರ್‌)ಗಳು ಸಿದ್ಧಗೊಂಡು ಹಲವು ಸಮಯಗಳೇ ಕಳೆದರೂ ಇನ್ನೂ ಕೂಡ ಕೇಂದ್ರವು ಕಾರ್ಯಾರಂಭಗೊಂಡಿಲ್ಲ. ಕೇಂದ್ರದ ನಿರ್ವಹಣೆಗೆ ಎನ್‌ಜಿಒ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯು ಟೆಂಡರ್‌ ಹಂತದಲ್ಲಿದ್ದು, ಮುನ್ನಡೆಸಲು ಅನುದಾನ ಬಿಡುಗಡೆಗೊಂಡ ತತ್‌ಕ್ಷಣ ಕೇಂದ್ರಗಳು ಕಾರ್ಯಾರಂಭ ಗೊಳ್ಳುತ್ತವೆ ಎನ್ನಲಾಗಿದೆ.

Advertisement

ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕಡಬದ ಕೊಯಿಲ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ 2 ಪಾಲನಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ವಿಟ್ಲ, ಬೆಳ್ತಂಗಡಿಯ ಕಣಿಯೂರು, ಪುತ್ತೂರಿನ ಪಾಣಾಜೆ ಹಾಗೂ ಸುಳ್ಯದ ಬೆಳ್ಳಾರೆಯಲ್ಲಿ ಎಂಡೋ ಪಾಲನಾ ಕೇಂದ್ರಗಳು ಸಿದ್ಧಗೊಂಡಿವೆ.

ದ.ಕ.ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ಅನುಷ್ಠಾನವು ಹಲವು ವರ್ಷಗಳ ಬೇಡಿಕೆಯಾಗಿದ್ದು, ಈಗಾಗಲೇ ಜಿಲ್ಲಾಧಿ ಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆ ಯಾಗಿದೆ. ಆಲಂಕಾರು ಹಾಗೂ ಕೊಕ್ಕಡದಲ್ಲಿ ಜಾಗವನ್ನೂ ಗುರುತಿಸಿದ್ದು, ಆದರೆ ಅದು ಇನ್ನೂ ಕೂಡ ಮಂಜೂರಾಗಿಲ್ಲ.

ಕೇಂದ್ರಗಳು
ಹಿಂದೆಯೇ ಮಂಜೂರು
ಕಳೆಡೆರಡು ವರ್ಷಗಳ ಹಿಂದೆಯೇ ಜಿಲ್ಲೆಗೆ ಹೆಚ್ಚುವರಿ 4 ಡೇ ಕೇರ್‌ ಕೇಂದ್ರಗಳು ಮಂಜೂರಾಗಿದ್ದರೂ, ಕಟ್ಟಡದ ಕಾಮಗಾರಿ, ನಿರ್ವಹಣೆಗಾಗಿ ಎನ್‌ಜಿಒ ಆಯ್ಕೆ, ನಿರ್ವಹಣ ಅನುದಾನ ಬಿಡುಗಡೆ ವಿಳಂಬವಾದ ಕಾರಣಕ್ಕೆ ಕೇಂದ್ರಗಳು ಎಂಡೋ ಸಂತ್ರಸ್ತರ ಆರೈಕೆಗೆ ತೆರೆದುಕೊಂಡಿರಲಿಲ್ಲ.

ಸರಕಾರದ ಲೆಕ್ಕಾ ಚಾರದ ಪ್ರಕಾರ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 4 ಸಾವಿರ ಎಂಡೋ ಸಂತ್ರಸ್ತರಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳು ಹಾಗೂ ಬಂಟ್ವಾಳದ ವಿಟ್ಲ ಭಾಗ ಮತ್ತು ಮಂಗಳೂರಿನ ಮೂಡುಬಿದಿರೆ ಭಾಗಗಳಲ್ಲಿ ಎಂಡೋ ಸಂತ್ರಸ್ತರ ಸಂಖ್ಯೆ ಹೆಚ್ಚಿವೆ. ಹೀಗಾಗಿ ಈ ಪ್ರದೇಶಗಳನ್ನು ಕೇಂದ್ರೀಕರಿಸಿ ಡೇ ಕೇರ್‌ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಹಗಲು ಹೊತ್ತಿನಲ್ಲಿ ಸಂತ್ರಸ್ತರನ್ನು ಈ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಿ ರಾತ್ರಿ ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಸಂತ್ರಸ್ತರನ್ನು ಕೇಂದ್ರದ ವಾಹನದ ಮೂಲಕವೇ ಕರೆತರುವ ವ್ಯವಸ್ಥೆ ಇರುತ್ತದೆ.

Advertisement

ನಿರ್ವಹಣೆಗೆ ಬೇಕಿದೆ ಅನುದಾನ
ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದ ಮೂಲಕ ಸುಮಾರು 1.77 ಕೋ.ರೂ.ಗಳಲ್ಲಿ 4 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕೇಂದ್ರದ ಕಟ್ಟಡಕ್ಕಾಗಿ ವಿಟ್ಲಕ್ಕೆ 47 ಲಕ್ಷ ರೂ., ಕಣಿಯೂರಿಗೆ 20.91 ಲಕ್ಷ ರೂ., ಪಾಣಾಜೆಗೆ 47.20 ಲಕ್ಷ ರೂ. ಹಾಗೂ ಬೆಳ್ಳಾರೆಗೆ 62 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ವೈದ್ಯಕೀಯ ವ್ಯವಸ್ಥೆಯ ಅನುಕೂಲದ ದೃಷ್ಟಿಯಿಂದ ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಕಟ್ಟಡದ ಕೆಲಸಗಳು ಪೂರ್ಣಗೊಂಡ ಬಳಿಕ ಎಲ್ಲ ಕೇಂದ್ರಗಳಿಗೂ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ. ಕೇಂದ್ರಕ್ಕೆ ಸಿಬಂದಿಯನ್ನು ನಿಯೋಜಿಸಿ ಮುನ್ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಈಗಾಗಲೇ ಎನ್‌ಜಿಒ ಸಂಸ್ಥೆಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜತೆಗೆ ಕೇಂದ್ರಗಳ ನಿರ್ವಹಣೆಗೆ ತಿಂಗಳಿಗೆ 2 ರಿಂದ 3 ಲಕ್ಷ ರೂ. ಮೊತ್ತ ಬೇಕಿರುವುದರಿಂದ ಸರಕಾರ ಅದನ್ನು ಕೂಡ ಬಿಡುಗಡೆ ಮಾಡಬೇಕಿದೆ.

ಎನ್‌ಜಿಒ ಆಯ್ಕೆ ಟೆಂಡರ್‌ ಹಂತ
ದ.ಕ.ಜಿಲ್ಲೆಯ 4 ಹೆಚ್ಚುವರಿ ಕೇಂದ್ರಗಳ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಕೇಂದ್ರವನ್ನು ನಿರ್ವಹಿಸಿಕೊಂಡು ಹೋಗುವುದಕ್ಕೆ ಎನ್‌ಜಿಒ ಆಯ್ಕೆ ಟೆಂಡರ್‌ ಹಂತದಲ್ಲಿದೆ. ನಿರ್ವಹಣೆಗೆ ಸರಕಾರದಿಂದ ಅನುದಾನ ಬಿಡುಗಡೆಯಾದ ತತ್‌ಕ್ಷಣ ಕೇಂದ್ರಗಳು ಕಾರ್ಯಾಚರಣೆಗೊಳ್ಳುತ್ತದೆ.
-ಸಾಜುದ್ದೀನ್‌, ಜಿಲ್ಲಾ ಸಂಯೋಜಕರು, ಎಂಡೋಸಲ್ಫಾನ್‌ ಕೋಶ, ದ.ಕ.ಜಿಲ್ಲೆ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next