Advertisement

ಕತ್ತಲಲ್ಲಿ ದೇಹಗಳಿಗೆ ಅಪ್ಪಳಿಸಿತು ಗುಂಡು : ಪ್ರತ್ಯಕ್ಷದರ್ಶಿ

02:43 AM Jul 07, 2020 | Hari Prasad |

ಕಾನ್ಪುರ/ಲಕ್ನೋ: ‘ಮೂರನೇ ತಂಡದ ನೇತೃತ್ವ ವಹಿಸಿದ್ದ, ಸದ್ಯ ಸಸ್ಪೆಂಡ್‌ ಆಗಿರುವ ಚೌಬೆಪುರ ಠಾಣಾಧಿಕಾರಿ ವಿನಯ ತಿವಾರಿ ರೌಡಿ ವಿಕಾಸ್‌ ದುಬೆ ಗ್ಯಾಂಗ್‌ನತ್ತ ಒಂದೇ ಒಂದು ಗುಂಡು ಹಾರಿಸಲಿಲ್ಲ’

Advertisement

– ಹೀಗೆಂದು ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್‌ ಅಧಿ­ಕಾರಿ ಕೌಶಲೇಂದ್ರ ಪ್ರತಾಪ್‌ ಜು.3ರ ಕರಾಳರಾತ್ರಿಯ ಘಟನೆ ವಿವರಿಸಿದ್ದಾರೆ.

ಬಿಕ್ರು ಗ್ರಾಮದಲ್ಲಿ ವಿದ್ಯುತ್‌ ಇರಲಿಲ್ಲ. ಹೀಗಾಗಿ ಕತ್ತಲಿನಲ್ಲಿ ಗುರಿ ಏನೆಂದೇ ಕಾಣುತ್ತಿರಲಿಲ್ಲ. ಜತೆಗೆ ಧಾರಾಕಾರ ಸುರಿಯುತ್ತಿರುವ ಮಳೆಯಂತೆ ಕಟ್ಟಡದ ಮೇಲಿ ನಿಂದ ಗುಂಡು ಸಿಡಿಯುತ್ತಲೇ ಇದ್ದವು. ಈ ಸಂದರ್ಭ ತಂಡದಲ್ಲಿದ್ದ 8 ಮಂದಿ ಪೊಲೀಸರು ಅಸುನೀಗಿದರು.

ಗುರುವಾರ ರಾತ್ರಿ 12.30ಕ್ಕೆ ಬಿಕ್ರು ಗ್ರಾಮಕ್ಕೆ ಸೂಚನೆ­ಯಂತೆ ಹೊರಟಿದ್ದೆವು. 1 ಗಂಟೆ ಸುಮಾರಿಗೆ ಗ್ರಾಮಕ್ಕೆ ತಲುಪಿದ್ದೆವು. 100 ಮೀಟರ್‌ ಮುಂದೆ ಹೋಗುವಷ್ಟರಲ್ಲಿ ಜೆಸಿಬಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದು ಗೊತ್ತಾಯಿತು. ಆದರೆ ಅದರ ಹಿಂದೆ ಭಾರೀ ಪಿತೂರಿ ಇತ್ತೆಂದು ಗೊತ್ತಾಗಲಿಲ್ಲ.

ನಾವು ಮುಂದೆ ಹೋಗುತ್ತಿದ್ದಂತೆಯೇ ಕಟ್ಟಡದ ಮೇಲಿಂದ ದುಬೆ ಸಹಚರರು ಗುಂಡು ಹಾರಿಸಿದರು. ನಮ್ಮಲ್ಲಿ ಕೆಲವರು ರಕ್ಷಣೆಗಾಗಿ ಓಡಿದರು. ನಾವು ಪ್ರತಿ ದಾಳಿ ನಡೆಸಿ­ದರೂ ಪ್ರಯೋ­ಜನವಾಗಲಿಲ್ಲ. 8 ಮಂದಿ ಅಸುನೀಗಿ, ಹಲವರು ಗಾಯಗೊಂಡರು ಎಂದು ಬಿತೂರ್‌ ಠಾಣೆಯ ಅಧಿಕಾರಿ ಯಾಗಿರುವ ಸಿಂಗ್‌ ಘಟನೆ­ಯನ್ನು ವಿವರಿಸಿದರು.

Advertisement

3ನೇ ತಂಡದ ನೇತೃತ್ವದ ವಹಿಸಿದ್ದ ಪ್ರಸ್ತುತ ಸಸ್ಪೆಂಡ್‌ ಆಗಿರುವ ವಿನಯ ತಿವಾರಿ ರೌಡಿಯ ಸಹಚರರತ್ತ ಒಂದೇ ಒಂದು ಗುಂಡು ಹಾರಿಸಲಿಲ್ಲ ಎಂದರು. ಚೌಬೆಪುರ ಠಾಣೆಯ ಅಧಿಕಾರಿ-ಸಿಬಂದಿ ವರ್ಗಕ್ಕೆ ಸ್ಥಳೀಯವಾಗಿ ಹೆಚ್ಚು ಮಾಹಿತಿ ಇರುತ್ತದೆ ಎಂದರು. ಇಂಥ ಸಂಕಷ್ಟ ಸ್ಥಿತಿಯಲ್ಲಿ ಅವರು ಪ್ರತಿ ದಾಳಿ ನಡೆಸದೆ ಮೂಕಪ್ರೇಕ್ಷಕರಾಗಿ­ದ್ದರು ಎಂದು ಕೌಶಲೇಂದ್ರ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.

ಮೂವರ ಸಸ್ಪೆಂಡ್‌: ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಉತ್ತರ ಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಎಚ್‌.ಸಿ.ಅವಸ್ತಿ, ಚೌಬೆಪುರ ಠಾಣೆಯ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌, ಓರ್ವ ಕಾನ್‌ಸ್ಟೆಬಲ್‌ನನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಠಾಣಾಧಿಕಾರಿ ವಿನಯ ತಿವಾರಿಯನ್ನು ಅಮಾನತು ಮಾಡಲಾಗಿದೆ. ಕಾನ್ಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿನೇಶ್‌ ಕುಮಾರ್‌ ಮಾತನಾಡಿ, ಮೂವರು ಪೊಲೀಸರ ವಿರುದ್ಧ ಪ್ರಾಥಮಿಕ ತನಿಖೆಗೆ ಆದೇಶ ನೀಡಲಾಗಿದೆ. ಬಿಕ್ರು ಗ್ರಾಮದಲ್ಲಿ ನಡೆದ ಪೊಲೀಸರ ಹತ್ಯೆ ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದರೆ ಎಫ್ಐಐರ್‌ ದಾಖಲಿಸಲೂ ಸೂಚಿಸಲಾಗಿದೆ ಎಂದರು.

ಪೊಲೀಸ್‌ ಮೂಲಗಳ ಪ್ರಕಾರ ರೌಡಿ ದುಬೆ ವಿರುದ್ಧ ಸ್ಥಳೀಯ ಉದ್ಯಮಿ ರಾಹುಲ್‌ ತಿವಾರಿ ನೀಡಿದ ದೂರಿನ ಅನ್ವಯ ದಾಳಿ ನಡೆಸಿದ್ದ ತಂಡದಲ್ಲಿ ವಿನಯ ತಿವಾರಿ ಮತ್ತು ಸೋಮವಾರ ಅಮಾನತು­ಗೊಂಡ ಮೂವರು ಪೊಲೀಸರು ಇದ್ದರು. ಇವರು ಮೊದಲೇ ರೌಡಿ ತಂಡಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಪೋಸ್ಟರ್‌: ದುಬೆ ನಾಪತ್ತೆಯಾಗಿದ್ದು, ಪತ್ತೆಗಾಗಿ ಶೋಧ ನಡೆಯುತ್ತಿದೆ. ಉತ್ತರ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ, ಟೋಲ್‌ ಪ್ಲಾಜಾಗಳಲ್ಲಿ ಆತನ ಫೋಟೋ ಅಂಟಿಸಲಾಗಿದೆ.

ಮೊತ್ತ ಹೆಚ್ಚಳ: ದುಬೆಯ ಬಗ್ಗೆ ಸುಳಿವು ನೀಡಿದವರಿಗೆ ನೀಡಲಾಗುವ ಬಹುಮಾನದ ಮೊತ್ತ ಹಾಲಿ 1 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗಳಿಗೆ ಹೆಚ್ಚಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಪ್ರತ್ಯೇಕ ಎನ್‌ಕೌಂಟರ್‌, 4 ಸೆರೆ
ಪೊಲೀಸರ ಬರ್ಬರ ಹತ್ಯೆ ಬಳಿಕ ಉತ್ತರ ಪ್ರದೇಶದಲ್ಲಿ ಗೂಂಡಾ­­­ಗಳನ್ನು ಹೆಡೆಮುರಿಕಟ್ಟಲಾಗುತ್ತಿದ್ದು, ಹಲವು ಪ್ರಕರಣ­ಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಸೋಮವಾರ ಬಂಧಿಸಲಾಗಿದೆ. ಶಾಮ್ಲಿ ಜಿಲ್ಲೆಯಲ್ಲಿ ಪೊಲೀಸರು ಎರಡು ಪ್ರತ್ಯೇಕ ಎನ್‌ಕೌಂಟರ್‌ ನಡೆಸಿ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಪೊಲೀಸರು ಸೇರಿದಂತೆ ದುಷ್ಕರ್ಮಿಗಳು ಗಾಯಗೊಂಡಿದ್ದಾರೆ.

ರೌಡಿ ವಿಕಾಸ್‌ ದುಬೆ ನೇಪಾಲಕ್ಕೆ ಪರಾರಿಯಾಗಿ ಮತ್ತೂಬ್ಬ ದಾವೂದ್‌ ಇಬ್ರಾಹಿಂ ಆಗುವ ಮೂಲಕ ಕಂಟಕನಾಗುವುದು ಬೇಡ. ಆ ದೇಶದ ಜತೆಗಿನ ಗಡಿಯೇ ಸಮಸ್ಯೆಗೆ ಕಾರಣ. 8 ಪೊಲೀಸರ ಹತ್ಯೆ ಘಟನೆ ‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಉ.ಪ್ರ. ಸರಕಾರದ ಬಣ್ಣ ಬಯಲು ಮಾಡಿದೆ.
– ಶಿವಸೇನೆ ಮುಖವಾಣಿ ‘ಸಾಮ್ನಾ’ ಸಂಪಾದಕೀಯ

Advertisement

Udayavani is now on Telegram. Click here to join our channel and stay updated with the latest news.

Next