ಹೊಸದಿಲ್ಲಿ : ಪಾಕಿಸ್ಥಾನದ ಲಾಹೋರ್‌ನಲ್ಲಿ ಸರಕಾರ, ಸೇನೆಯ ಮತ್ತು ಬೇಹು ದಳದ ಕೃಪೆಯಲ್ಲಿ ಅಡಗಿಕೊಂಡಿರುವ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ನನ್ನು ಕೊಲೆಗೈವ ಸಂಚು ರೂಪಿಸುತ್ತಿದ್ದಾನೆ ಎಂದು ಗುಪ್ತಚರ ದಳ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಅಂತೆಯೇ ಛೋಟಾ ರಾಜನ್‌ನ ಸುರಕ್ಷೆ ಮತ್ತು ಜೈಲಿನೊಳಗಿನ ಭದ್ರತಾ ವ್ಯವಸ್ಥೆಗಳ ಕೂಲಂಕಷ ಪರಾಮರ್ಶೆಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ದಿಲ್ಲಿಯ ಟಾಪ್ ಗ್ಯಾಂಗ್‌ಸ್ಟರ್ ಆಗಿರುವ ನೀರಜ್ ಬವಾನಾ ನಿಕಟವರ್ತಿಯೋರ್ವನಿಂದ ಪಡೆದ ರಹಸ್ಯ ಮಾಹಿತಿಗಳನ್ನು ಆಧರಿಸಿ ಗುಪ್ತಚರ ದಳ ತಿಹಾರ್ ಜೈಲು ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಬವಾನಾ ನಿಕಟವರ್ತಿ ಖುದ್ದು ಓರ್ವ ಗ್ಯಾಂಗ್‌ಸ್ಟರ್ ಆಗಿದ್ದು ಪ್ರಕೃತ ಬೇಲ್‌ನಲ್ಲಿ ಹೊರಗಿದ್ದಾನೆ. ಈತನು ಮದ್ಯದ ಅಮಲಿನಲ್ಲಿ ತನ್ನ ನಿಕಟವರ್ತಿಯೊಂದಿಗೆ ಪೋನ್ ನಲ್ಲಿ “ಛೋಟಾ ರಾಜನ್ ಕೊಲೆಗೆ ದಾವೂದ್ ಸಂಚು ರೂಪಿಸುತ್ತಿದ್ದಾನೆ’ ಎಂದು ಹೇಳಿರುವುದನ್ನು ಕದ್ದಾಲಿಸಲಾಗಿದೆ. ಇದುವೇ ತಿಹಾರ್ ಕಟ್ಟೆಚ್ಚರಕ್ಕೆ ಕಾರಣವಾಗಿದೆ.
ಛೋಟಾ ರಾಜನ್ ನನ್ನು ತಿಹಾರ್ ಜೈಲಿನೊಳಗೇ ಕೊಲ್ಲಿಸುವುದಕ್ಕಾಗಿ ಗ್ಯಾಂಗ್ ಸ್ಟರ್ ಬವಾನಾ ಜತೆಗೆ ಡಿ ಕಂಪೆನಿ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖೀಸಿ ಮಾಧ್ಯಮ ವರದಿ ತಿಳಿಸಿದೆ. ಛೋಟಾ ರಾಜನ್‌ನನ್ನು ಕೊಂದು ಮುಗಿಸುವುದಕ್ಕೆ ದಾವೂದ್ ಕಳೆದ ಎರಡು ದಶಕಗಳಿಂದಲೂ ಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.