ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ 4 ಬಾರಿ ತನ್ನ ಮನೆಗಳನ್ನು ಬದಲಾಯಿಸಿಕೊಂಡಿದ್ದಾನಂತೆ!
Advertisement
ಹೀಗೆಂದು ಹೇಳಿರುವುದು ಬೇರ್ಯಾರೂ ಅಲ್ಲ. ಸ್ವತಃ ದಾವೂದ್‌ನ ಸೋದರ ಇಕ್ಬಾಲ್ ಕಸ್ಕರ್. ಉದ್ಯಮಿಯೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮುಂಬೈ ಪೊಲೀಸರ ವಶದಲ್ಲಿರುವ ಕಸ್ಕರ್, ವಿಚಾರಣೆ ವೇಳೆ ದಾವೂದ್‌ಗೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಭಾರತದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಕಂಗಾಲಾಗಿರುವ ದಾವೂದ್, ಪಾಕಿಸ್ತಾನದಲ್ಲೇ ತನ್ನ ನೆಲೆಯನ್ನು 4 ಬಾರಿ ಬದಲಿಸಿಕೊಂಡಿದ್ದಾನೆ. ಮಾತ್ರವಲ್ಲ, ತನ್ನ ಭದ್ರತೆಯನ್ನೂ ಹೆಚ್ಚಿಸಿಕೊಂಡಿದ್ದಾನೆ ಎಂದು ಕಸ್ಕರ್ ಬಾಯಿಬಿಟ್ಟಿದ್ದಾನೆ. ಭಾರತೀಯ ಭದ್ರತಾ ಸಂಸ್ಥೆಗಳು ತಮ್ಮ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರ ಬಹುದು ಎಂಬ ಭೀತಿಯೂ ದಾವೂದ್‌ನನ್ನು ಕಾಡುತ್ತಿದ್ದು, ಅದಕ್ಕಾಗಿ ಆತ ಭಾರತದಲ್ಲಿರುವ ತನ್ನ ಸಂಬಂಧಿಕರೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನೂ ನಿಲ್ಲಿಸಿದ್ದಾನೆ ಎಂದೂ ಕಸ್ಕರ್ ಪೊಲೀಸರಿಗೆ ತಿಳಿಸಿರುವುದಾಗಿ ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ. ಕೇಂದ್ರ ಸರ್ಕಾರ, ದಾವೂದ್ ಪಾಕ್‌ನಲ್ಲೇ ಇದ್ದಾನೆ ಹಾಗೂ ಆತನನ್ನು ಗಡಿಪಾರು ನಡೆಸುವ ಪ್ರಕ್ರಿಯೆ ತ್ವರಿತ ಗೊಳಿಸುತ್ತೇವೆ ಎಂದು ಹೇಳುತ್ತಾ ಬಂದಿದೆ. ಇನ್ನೊಂದೆಡೆ, ಪಾಕಿಸ್ತಾನವು ನಮ್ಮಲ್ಲಿ ಇಲ್ಲ ಎನ್ನುತ್ತಲೇ ಇದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಮ್ಮೆನ್ನೆಸ್) ಮುಖ್ಯಸ್ಥ ರಾಜ್ ಠಾಕ್ರೆ ಹೊಸ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ವಾಪಸಾಗುವ ಕುರಿತು ಕೇಂದ್ರದೊಂದಿಗೆ ಮಾತುಕತೆ ನಡೆಸುತ್ತಿದ್ದಾನೆ ಎಂದು ಠಾಕ್ರೆ ಗುರುವಾರ ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿವರ ಬಹಿರಂಗ ಮಾಡಿದ್ದಾರೆ. ವಿಶೇಷ ವೆಂದರೆ, ಗುರುವಾರವೇ ಫೇಸ್‌ಬುಕ್ ಅಕೌಂಟ್ ಮಾಡಿಕೊಂಡಿರುವ ರಾಜ್ ಠಾಕ್ರೆ ಈ ವಿಚಾರವನ್ನೇ ಮೊದಲು ಬರೆದಿದ್ದಾರೆ. “ದಾವೂದ್ ಈಗ ದೈಹಿಕವಾಗಿ ಅಂಗವಿಕಲ. ಸ್ವದೇಶದಲ್ಲೇ ಕೊನೆಯ ದಿನಗಳನ್ನು ಕಳೆಯಬೇಕು ಎಂಬುವುದು ಅವನ ಬಯಕೆಯಾಗಿದೆ. ಹಾಗಾಗಿ, ಭಾರತಕ್ಕೆ ಹಿಂದಿರುಗುವ ಕುರಿತು ಆತ ಬಿಜೆಪಿಯೊಂದಿಗೆ ಸಂಧಾನ ನಡೆಸುತ್ತಿದ್ದಾನೆ. ಆಡಳಿತಾರೂಢ ಬಿಜೆಪಿ ಕೂಡ ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. 2019ರ ಲೋಕಸಭೆ ಚುನಾವಣೆಗೆ ಸ್ವಲ್ಪ ದಿನವಿರುವಾಗ ದಾವೂದ್‌ನನ್ನು ಭಾರತಕ್ಕೆ ಕರೆಸಿಕೊಂಡು, ಆತನನ್ನು ನಾವೇ ಕರೆತಂದೆವು ಎಂದು ಬಿಂಬಿಸಿಕೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ. ನಾನೇನೂ ಜೋಕ್ ಮಾಡುತ್ತಿಲ್ಲ. ಈ ಸತ್ಯ ನಿಮಗೆ ಮುಂದೆ ಗೊತ್ತಾಗುತ್ತದೆ,’ ಎಂದಿದ್ದಾರೆ ರಾಜ್ ಠಾಕ್ರೆ