ವಾಷಿಂಗ್ಟನ್: ದಾವೂದ್ ಇಬ್ರಾಹಿಂನ “ಡಿ-ಕಂಪೆನಿ’ ಸಾಮ್ರಾಜ್ಯ ಎಲ್ಲರ ಊಹೆಗೂ ಮೀರಿ ಜಗತ್ತಿನ ನಾನಾ ದೇಶಗಳಲ್ಲಿ, ನಾನಾ ರೂಪಗಳಲ್ಲಿ ವ್ಯವಸ್ಥಿತವಾಗಿ ಹರಡಿಕೊಂಡಿದೆ ಎಂಬ ಆಘಾತಕಾರಿ ಮಾಹಿತಿ ಯನ್ನು ಜಾರ್ಜ್ ಮ್ಯಾಸನ್ ವಿಶ್ವವಿದ್ಯಾಲಯದ ಶಾರ್ ಸ್ಕೂಲ್ ಆಫ್ ಪಾಲಿಸಿ ಆ್ಯಂಡ್ ಗವರ್ನ್ಮೆಂಟ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೊಫೆಸರ್ ಡಾ| ಲೂಯಿಸ್ ಶೆಲ್ಲಿ ವಿವರಿಸಿದ್ದಾರೆ.
ಅಮೆರಿಕದ ಸಂಸತ್ತಿನಿಂದ ನೇಮಕಗೊಂಡಿರುವ ಭಯೋತ್ಪಾದನೆ ಮತ್ತು ಕಾನೂನು ಬಾಹಿರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಪಟ್ಟ ಉಪಸಮಿತಿ, ತಜ್ಞರಿಂದ ಭಯೋತ್ಪಾದನೆ ಬಗ್ಗೆ ಮಾಹಿತಿ ಪಡೆಯಲು ಕರೆಯಲಾಗಿದ್ದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದರು. ದಾವೂದ್ ಸಾಮ್ರಾಜ್ಯದ ವಿಸ್ತೃತ ರೂಪಗಳನ್ನು ತೆರೆದಿಟ್ಟಿದ್ದು, ಅವರು ನೀಡಿದ ಮಾಹಿತಿ “ದಾವೂದ್ ಬಾಧಿತ’ ಹಲವಾರು ದೇಶಗಳಿಗೆ ಪ್ರಯೋಜನಕಾರಿಯಾಗಿದೆ.
ಪಾತಕಿಯ ಡ್ರಗ್ಸ್ ಸಾಮ್ರಾಜ್ಯ: ವಿಚಾರ ಮಂಡನೆ ವೇಳೆ, ದಾವೂದ್ ಬಗ್ಗೆ ಪ್ರಸ್ತಾವಿಸಿದ ಡಾ| ಶೆಲ್ಲಿ “ಭಾರತದಲ್ಲಿ ತನ್ನ ಮೂಲ ಬೇರುಗಳನ್ನು ಹೊಂದಿರುವ ಡಿ-ಕಂಪೆನಿ, ಸದ್ಯಕ್ಕೆ ಪಾಕ್‌ನ ಕರಾಚಿಯನ್ನು ತನ್ನ ಡ್ರಗ್ಸ್ ಮಾರಾಟದ ಪ್ರಮುಖ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದೆ. ಅಲ್ಲದೆ, ವಿವಿಧ ದೇಶಗಳಲ್ಲಿ ತನ್ನ ಜಾಲವನ್ನು ಹಬ್ಬಿಸಿದೆ. ಮೆಕ್ಸಿಕೋದ ಡ್ರಗ್ಸ್ ಮಾಫಿಯಾಗಳ ಮಾದರಿಯಲ್ಲೇ ನಾನಾ ದೇಶಗಳಲ್ಲಿ ಅಸಂಖ್ಯ ಕವಲುಗಳನ್ನು ಡಿ-ಕಂಪೆನಿ ಹೊಂದಿದೆ. ಆದರೆ, ಇವೆಲ್ಲವನ್ನೂ ಒಂದು ತಹಬಂದಿಯಲ್ಲಿಟ್ಟು ಕೊಂಡು ಸುಲಲಿತವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ’ ಎಂದಿದ್ದಾರೆ.
ಇದೇ ವೇಳೆ, ಡಿ-ಕಂಪೆನಿ ವಿವಿಧ ಜಾಲಗಳ ಬಗ್ಗೆ ಮಾತನಾಡಿದ ಅವರು, “ಡ್ರಗ್ಸ್ ಮಾರಾಟ ಮಾತ್ರವಲ್ಲದೆ, ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ, ನಕಲಿ ಡಿವಿಡಿ ತಯಾರಿಕೆ ಮಾಡುತ್ತಿದೆಯಲ್ಲದೆ, ತನ್ನ ಹವಾಲಾ ಏಜೆಂಟರುಗಳಿಂದ ಅಕ್ರಮ ಹಣಕಾಸು ವ್ಯವಹಾರಗಳನ್ನು ನಡೆಸುತ್ತಿದೆ’. ಆ ಮೂಲಕ ಭಾರತ, ಅಮೆರಿಕ ಮಾತ್ರವಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ದಾವೂದ್ ಹೇಗೆ ಅಪಾಯಕಾರಿಯಾಗಿ ಪರಿಗಣಿಸಿದ್ದಾನೆ ಎಂದು ವಿಶ್ಲೇಷಿಸಿದರು.
ಭಾರತದ ಸತತ ಪ್ರಯತ್ನ
ದಾವೂದ್‌ನ ಕರಾಳ ಸಾಮ್ರಾಜ್ಯ ಹಾಗೂ ಆತ ಇಡೀ ವಿಶ್ವಕ್ಕೇ ಹೇಗೆ ಮಾರಕ ಎಂಬುದನ್ನು ವಿಶ್ವದ ಗಮನಕ್ಕೆ ತರುವ ಪ್ರಯತ್ನವನ್ನು ಭಾರತ ಹಲವಾರು ವರ್ಷಗಳಿಂದಲೂ ಮಾಡುತ್ತಲೇ ಇತ್ತು. ಅಲ್‌ಕಾಯಿದಾ ಉಗ್ರರ ಜತೆ ನಂಟು ಹೊಂದಿರುವ ಆರೋಪದಡಿ ದಾವೂದ್‌ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಘೋಷಿಸಿತ್ತು. ಇದಾದ ಮೇಲೆ, ವಿಶ್ವ ಸಂಸ್ಥೆಯೂ ತನ್ನ ಉಗ್ರ ನಿಗ್ರಹ ತೀರ್ಮಾನದಡಿ ದಾವೂದ್‌ಗೆ ನಿಷೇಧ ಹೇರಿತ್ತು.