ಹೊಸದಿಲ್ಲಿ : 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಸೂತ್ರಧಾರ ದಾವೂದ್ ಇಬ್ರಾಹಿಂ ಪಾಕಿಸ್ಥಾನದ ಕರಾಚಿಯಲ್ಲೇ ಅಡಗಿಕೊಂಡಿರುವ ಬಗ್ಗೆ ಭಾರತೀಯ ರಾಷ್ಟ್ರೀಯ ಮಾಧ್ಯಮಗಳಿಗೆ ಹೊಸ ಸಾಕ್ಷ್ಯ ಲಭಿಸಿದೆ.
51ರ ಹರೆಯದ ದಾವೂದ್ ಇಬ್ರಾಹಿಂನ ಡಿ ಕಂಪೆನಿಯ ಅಂತಾರಾಷ್ಟ್ರೀಯ ಸಂಚಾಲಕನಾಗಿರುವ ಝಬೀರ್ ಮೋತಿವಾಲಾ , ದಾವೂದ್ ಇಬ್ರಾಹಿಂ ನನ್ನು ಈಚೆಗೆ ಕರಾಚಿಯ ಆತನ ಅಡಗುದಾಣದಲ್ಲಿ ಭೇಟಿಯಾದ ಚಿತ್ರಗಳು ಈಗ ಭಾರತೀಯ ಮಾಧ್ಯಮಗಳಿಗೆ ದೊರಕಿದ್ದು ದಾವೂದ್ ಪಾಕಿಸ್ಥಾನದಲ್ಲೇ ಇರುವುದು ಇದೀಗ ಮತ್ತೆ ಸಾಬೀತಾಗಿದೆ.
1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಬಳಿಕ ಪಾಕಿಸ್ಥಾನಕ್ಕೆ ಪಲಾಯನ ಗೈದು ಕಳೆದ 25 ವರ್ಷಗಳಿಂದ ಅಲ್ಲೇ ತನ್ನ ಕಾಯಂ ನೆಲೆಯನ್ನು ಕಂಡುಕೊಂಡು ಅಲ್ಲಿಂದಲೇ ತನ್ನ ಜಾಗತಿಕ ಭೂಗತ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವ ದಾವೂದ್ ಇಬ್ರಾಹಿಂ, ಪಾಕಿಸ್ಥಾನದಲ್ಲಿ ಇಲ್ಲವೇ ಇಲ್ಲ ಎಂದು ಪಾಕ್ ಸರಕಾರ ಹೇಳುತ್ತಿರುವುದೆಲ್ಲ ಕೇವಲ ಬೊಗಳೆ ಎಂದು ಈಚೆಗೆ ಅಮೆರಿಕ ಕೂಡ ಬ್ರಿಟನ್ ಕೋರ್ಟಿನಲ್ಲಿ ಹೇಳಿತ್ತು.
ಅದಕ್ಕೆ ಪೂರಕವಾಗಿ ಇದೀಗ ಭಾರತೀಯ ಮಾಧ್ಯಮಗಳಿಗೆ ಲಭಿಸಿರುವ ದಾವೂದ್ ಮತ್ತು ಆತನ ಬಲಗೈ ಬಂಟ, ಅತ್ಯಂತ ನಂಬಿಗಸ್ಥ ನಿಕಟವರ್ತಿ, ಝಬೀರ್ ಮೋತಿವಾಲಾ ಜೊತೆಯಾಗಿ ಕಾಣಿಸಿಕೊಂಡಿರುವ ತಾಜಾ ಫೋಟೋಗಳು ದಾವೂದ್ ಪಾಕಿಸ್ಥಾನದ ಕರಾಚಿಯಲ್ಲೇ ಇರುವುದನ್ನು ದೃಢಪಡಿಸಿವೆ ಎಂದು ವರದಿಗಳು ಹೇಳಿವೆ.
ಮಾಧ್ಯಮಗಳ ಕೈವಶವಾಗಿರುವ ಈ ಫೋಟೋದಲ್ಲಿ ಕ್ಲೀನ್ ಶೇವ್ ಮಾಡಿಕೊಂಡಿರುವ ದಾವೂದ್ ಇಬ್ರಾಹಿಂ, ತನ್ನ ನಂಬಿಗಸ್ಥ ನಿಕಟವರ್ತಿ ಮೋತಿವಾಲಾ ಜತೆಗೆ ಮಾತುಕತೆಯಲ್ಲಿ ನಿರತವಾಗಿರುವುದು ಕಂಡು ಬರುತ್ತದೆ.
ಈ ಮೊದಲು ದಾವೂದ್ ಅಸ್ವಸ್ಥನಿರುವುದಾಗಿಯೂ ಮೊಣಕಾಲ ಗಂಟು ನೋವಿನಿಂದ ತೀವ್ರವಾಗಿ ಬಳಲುತ್ತಿರುವುದಾಗಿಯೂ ಹೇಳಲಾಗಿತ್ತು. ಆದರೆ ಈ ತಾಜಾ ಫೋಟೋಗಳಲ್ಲಿ ದಾವೂದ್ ಆರೋಗ್ಯವಂತನಿರುವುದು ಕಂಡು ಬರುತ್ತದೆ.
ಅಂದ ಹಾಗೆ ಮೋತಿವಾಲಾ ಕರಾಚಿಯಲ್ಲಿ ದಾವೂದ್ ವಾಸವಾಗಿರುವ ಕ್ಲಿಫ್ಟನ್ ಹೌಸ್ ಸನಿಹದ ಬಂಗ್ಲೆಯಲ್ಲೇ ವಾಸಿಸುತ್ತಿದ್ದಾನೆ. ದಾವೂದ್ ಪತ್ನಿ ಮೆಹಜಬೀನ್ ಮತ್ತು ಪುತ್ರ ಮೊಯಿನ್ ನವಾಜ್ ಜತಗೆ ಮೋತಿವಾಲಾಗೆ ಕೌಟುಂಬಿಕ ನಂಟು ಇದೆ ಎಂದು ವರದಿಗಳು ತಿಳಿಸಿವೆ.