ದಾವಣಗೆರೆ: ಓರ್ವ ಕುಲಪತಿಗಿಂತಲೂ ಪ್ರೊ| ಬಿ.ಬಕ್ಕಪ್ಪ ದಾವಿವಿಗೆ ಹೆಚ್ಚು ಸೇವೆ ಮಾಡಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಬಿ.ಬಿ ಕಲಿವಾಳ್ ಹೇಳಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ನಿರ್ವಹಣಾ ವಿಭಾಗದ ಡೀನ್ ಪ್ರೊ| ಬಕ್ಕಪ್ಪನವರ ವಯೋ ನಿವೃತ್ತಿ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಿವಿ ಕಟ್ಟಿ ಬೆಳೆಸುವುದರಲ್ಲಿ ಬಕ್ಕಪ್ಪನವರ ಪಾತ್ರ ಇದೆ.
ನಮಗೆ ಅನ್ನ ನೀಡುವ ಸಂಸ್ಥೆಗೆ ಎಷ್ಟು ಸೇವೆ ಸಲ್ಲಿಸಿದರೂ ಕಡಿಮೆಯೇ. ಈ ವಿಚಾರದಲ್ಲಿ ಬಕ್ಕಪ್ಪನವರ ಸೇವೆ ಶ್ಲಾಘನೀಯ ಎಂದರು. ಪ್ರಾರಂಭ ಹಂತದಿಂದಲೂ ವಿಶ್ವವಿದ್ಯಾನಿಲಯ ಕಟ್ಟಿ ಬೆಳೆಸಿದ ಪ್ರೊ| ಬಕ್ಕಪ್ಪ, ಅನೇಕ ಸಂದರ್ಭಗಳಲ್ಲಿ ಸರಿ ತಪ್ಪುಗಳನ್ನು ಗುರುತಿಸಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಅವರ ಸೇವೆಯನ್ನು ತಮ್ಮನ್ನು ಸೇರಿದಂತೆ ವಿವಿ ಯಾವ ಪ್ರಾಧ್ಯಾಪಕರು, ವಿದ್ಯಾರ್ಥಿಗಳೂ ಮರೆಯುವುದಿಲ್ಲ.
ಮುಂದಿನ ದಿನಗಳಲ್ಲಿಯೂ ಅವರ ಸಲಹೆ, ಸಹಕಾರ, ಮಾರ್ಗದರ್ಶನ ಮುಂದುವರಿಯಲಿ ಎಂದರು. ಪ್ರೊ| ಮುರುಗಯ್ಯ ಮಾತನಾಡಿ, ಕೇವಲ ಸ್ನಾತಕೋತ್ತರ ಕೇಂದ್ರವಾಗಿದ್ದ ಈ ಕ್ಯಾಂಪಸ್ ವಿಶ್ವವಿದ್ಯಾನಿಲಯನ್ನಾಗಿಸುವಲ್ಲಿ ಬಕ್ಕಪ್ಪ ಸಾಕಷ್ಟು ಶ್ರಮವಹಿಸಿದ್ದಾರೆ. ಆಗ ಪ್ರಾಧ್ಯಾಪಕರಾಗಿದ್ದರೂ ವಿವಿ ಕಟ್ಟಡ ಕಾಮಗಾರಿಗಳನ್ನು ದಿನನಿತ್ಯ ಪರಿಶೀಲಿಸಿ, ಅಗತ್ಯ ಬದಲಾವಣೆ ಮಾಡಿಸುತ್ತಿದ್ದರು. ಅಲ್ಲದೆ, ಪಠ್ಯಕ್ರಮದಲ್ಲಿ ನಮ್ಮ ವಿಶ್ವವಿದ್ಯಾನಿಲಯ ಭಿನ್ನತೆ ಹೊಂದಿರಬೇಕು ಎಂಬ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಪುನರಚನೆ ಮಾಡಿದರು.
ವಿಭಾಗ ಮಟ್ಟದಲ್ಲಿಯೇ ಐದು ಸಾವಿರಕ್ಕೂ ಹೆಚ್ಚಿನ ಪುಸ್ತಕ ಒಳಗೊಂಡ ಆಂತರಿಕ ಗ್ರಂಥಾಲಯ ಸ್ಥಾಪಿಸುವಲ್ಲಿ ಶ್ರಮಿಸಿದ್ದಾರೆ ಎಂದರು. ಪ್ರೊ| ಬಿ ಬಕ್ಕಪ್ಪ ಮಾತನಾಡಿ, ಒಂದು ವಿಶ್ವವಿದ್ಯಾನಿಲಯಕ್ಕೆ ನಿಲುವಿನ ಜತೆಗೆ ಗುಣಾತ್ಮಕ ಸಂಸ್ಕೃತಿಯ ಅವಶ್ಯಕತೆ ಇದೆ. ಬೋಧಕರು ವಿಷಯ ಗ್ರಹಿಸಿ, ಅರ್ಥೈಸಿಕೊಂಡು ಚರ್ಚೆಗೊಳಪಡಿಸಬೇಕು.
ವಿಶ್ವವಿದ್ಯಾನಿಲಯದ ನಿಯಮ, ಕಾನೂನುಗಳ ಬಗ್ಗೆ ತಿಳಿದುಕೊಂಡಲ್ಲಿ ಮಾತ್ರ ವಿಶ್ವವಿದ್ಯಾನಿಲದ ಕಲ್ಪನೆ ಸಹಕಾರಗೊಳಿಸಲು ಸಾಧ್ಯ ಎಂದರು. ಕೆಲವರಿಗೆ ನಾನು ಕುಲಪತಿ ಸ್ಥಾನಕ್ಕಾಗಿ ಇಷ್ಟೆಲ್ಲಾ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ಕಲ್ಪನೆ ಇತ್ತು. ಆದರೆ, ಎಂದೂ ನನಗೆ ಆ ಸ್ಥಾನದ ಯೋಚನೆಯೇ ಇರಲಿಲ್ಲ. ಇಂದು ನಾನೇನಾದರೂ ಸಾಧಿಧಿಸಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನ ಸಹೊದ್ಯೋಗಿಗಳು.
ನನ್ನನ್ನು ಪರಿಪಕ್ವಗೊಳಿಸಲು ಅವರು ಅನೇಕ ರೀತಿಯಲ್ಲಿ ಸಹಕಾರಿಯಾಗಿದ್ದಾರೆ ಸ್ಮರಿಸಿದರು. ಪರೀûಾಂಗ ಕುಲಸಚಿವ ಟಿ.ಬಿ ವೆಂಕಟೇಶ್ ಮಾತನಾಡಿ, ಬಕ್ಕಪ್ಪನವರು ದಾವಣಗೆರೆಯಲ್ಲಿಯೇ ಹುಟ್ಟಿ, ವಿದ್ಯಾಭ್ಯಾಸ ಮುಗಿಸಿ, ಇಲ್ಲಿಯೇ ವೃತ್ತಿ ನಿರ್ವಹಿಸಿ ನಿವೃತ್ತರಾಗುತ್ತಿರುವುದು ವಿಶೇಷ ಎಂದು ಬಣ್ಣಿಸಿದರು. ವಿವಿ ಪ್ರಾಧ್ಯಾಪಕರಾದ ಪ್ರೊ| ಶಿಶುಪಾಲ. ಪ್ರೊ| ರಾಮಲಿಂಗಪ್ಪ, ಪ್ರೊ| ಜಿ.ಟಿ ಗೊವಿಂದಪ್ಪ. ಪ್ರೊ| ರಂಗಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ರಾಜಕುಮಾರ್ ಇತರರು ಬಕ್ಕಪ್ಪನವರ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.