Advertisement

ಡೇವಿಸ್‌ ಕಪ್‌ : ಭಾರತ ಜಯಭೇರಿ

03:45 AM Feb 06, 2017 | Harsha Rao |

ಪುಣೆ: ರಾಮ್‌ಕುಮಾರ್‌ ರಾಮನಾಥನ್‌ ಅವರ ಅಮೋಘ ಆಟದಿಂದಾಗಿ ಭಾರತವು ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಡೇವಿಸ್‌ ಕಪ್‌ ಏಶ್ಯ ಓಶಿಯಾನಿಯಾ ಬಣ ಒಂದರ ಹೋರಾಟದಲ್ಲಿ 3-1 ಮುನ್ನಡೆ ಸಾಧಿಸಿ ಮುಂದಿನ ಸುತ್ತಿಗೇರಿತು. 
ರವಿವಾರ ನಡೆದ ಮೊದಲ ಮರು ಸಿಂಗಲ್ಸ್‌ನಲ್ಲಿ ಎರಡು ತಾಸುಗಳ ಕಠಿನ ಹೋರಾಟ ನಡೆಸಿದ ರಾಮ್‌ಕುಮಾರ್‌ 7-5, 6-1, 6-0 ಸೆಟ್‌ಗಳಿಂದ ನ್ಯೂಜಿಲ್ಯಾಂಡಿನ ಫಿನ್‌ ಟಿಯರ್‌ನೆà ಅವರನ್ನು ಉರುಳಿಸಿ ಭಾರತ ನಿಟಿುrಸಿರು ಬಿಡುವಂತೆ ಮಾಡಿದರು. ಆಬಳಿಕ ನಡೆದ ದ್ವಿತೀಯ ಮರು ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ ಅವರು ಜೋಸ್‌ ಸ್ಥಾಥಂ ಅವರನ್ನು 7-5, 3-6, 6-4 ಸೆಟ್‌ಗಳಿಂದ ಉರುಳಿಸಿದರು.

Advertisement

ಮರು ಸಿಂಗಲ್ಸ್‌ನ ಎರಡು ಪಂದ್ಯ ಗೆದ್ದ ಭಾರತ ಈ ಹೋರಾಟವನ್ನು 4-1 ಅಂತರದಿಂದ ಜಯಿಸಿ ದ್ವಿತೀಯ ಸುತ್ತಿಗೇರಿತು. ದ್ವಿತೀಯ ಸುತ್ತಿನಲ್ಲಿ ಭಾರತ ಉಜ್ಬೆಕಿಸ್ಥಾನ ತಂಡವನ್ನು ಎದುರಿಸಲಿದೆ. ಈ ಹೋರಾಟ ಎಪ್ರಿಲ್‌ 7ರಿಂದ 9ರವರೆಗೆ ನಡೆಯಲಿದೆ. ಉಜ್ಬೆಕಿಸ್ಥಾನ ಮೊದಲ ಸುತ್ತಿನಲ್ಲಿ ದಕ್ಷಿಣ ಕೊರಿಯವನ್ನು ಸೋಲಿಸಿತ್ತು.

ಶುಕ್ರವಾರ ನಡೆದ ಮೊದಲೆರಡು ಸಿಂಗಲ್ಸ್‌ನಲ್ಲಿ ಜಯ ಸಾಧಿಸುವ ಮೂಲಕ ಭಾರತ 2-0 ಮುನ್ನಡೆ ಸಾಧಿಸಿತ್ತು. ಆದರೆ ಡಬಲ್ಸ್‌ನಲ್ಲಿ ಅನುಭವಿ ಪೇಸ್‌ ಮತ್ತು ವಿಷ್ಣುವರ್ಧನ್‌ ಅವರು ಆರ್ಟೆಮ್‌ ಸಿತಾಕ್‌ ಮತ್ತು ಮೈಕಲ್‌ ವೀನಸ್‌ ಅವರಿಗೆ ಶರಣಾಗಿ ಆಘಾತ ಅನುಭವಿಸಿತ್ತು. ಹಾಗಾಗಿ ರವಿವಾರದ ಮರು ಸಿಂಗಲ್ಸ್‌ನಲ್ಲಿ ಒಂದರಲ್ಲಿ ಗೆಲುವು ಸಾಧಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಆದರೆ ಭಾರತ ಎರಡೂ ಪಂದ್ಯ ಗೆದ್ದು ಜಯಭೇರಿ ಬಾರಿಸಿತು.

22ರ ಹರೆಯದ ಚೆನ್ನೈಯ ರಾಮ್‌ಕುಮಾರ್‌ ಅವರ ಮೇಲೆ ಭಾರತ ಭರವಸೆ ಇಟ್ಟಿತ್ತು. 276ನೇ ರ್‍ಯಾಂಕಿನ ರಾಮ್‌ಕುಮಾರ್‌ 12 ಏಸ್‌ ಸಿಡಿಸಿ ಪಂದ್ಯ ಗೆಲ್ಲಲು ಯಶಸ್ವಿಯಾದರು. ಮೊದಲ ಸೆಟ್‌ನಲ್ಲಿ ಇಬ್ಬರೂ ಆಟಗಾರರು ತೀವ್ರ ಪೈಪೋಟಿ ನಡೆಸಿದ್ದರು. 51 ನಿಮಿಷಗಳ ಹೋರಾಟದಲ್ಲಿ ಮೊದಲ ಸೆಟ್‌ ಗೆಲ್ಲುವಲ್ಲಿ ರಾಮ್‌ಕುಮಾರ್‌ ಯಶಸ್ವಿಯಾಗಿದ್ದರು. ಮುಂದಿನೆರಡು ಸೆಟ್‌ಗಳನ್ನು ಸುಲಭವಾಗಿ ವಶಪಡಿಸಿಕೊಂಡ ರಾಮ್‌ಕುಮಾರ್‌ ಭಾರತವನ್ನು ಸಂಭ್ರಮದಲ್ಲಿ ಮುಳುಗಿಸಿದರು. ಈ ಗೆಲುವಿನ ಮೂಲಕ ಭಾರತ ತಂಡವು ಆನಂದ್‌ ಅಮೃತ್‌ರಾಜ್‌ಗೆ ಗೆಲುವಿನ ವಿದಾಯ ಹೇಳಿತು. ಮೂರು ವರ್ಷ ಭಾರತೀಯ ಡೇವಿಸ್‌ ಕಪ್‌ ತಂಡದ ಆಟವಾಡದ ನಾಯಕರಾಗಿದ್ದ ಆನಂದ್‌ ಅಮೃತ್‌ರಾಜ್‌ ಅವರಿಗಿದು ಕೊನೆಯ ಹೋರಾಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next