ಹೊಸದಿಲ್ಲಿ: ತಟಸ್ಥ ತಾಣಕ್ಕೆ ಭಾರತ ಮತ್ತು ಪಾಕಿಸ್ಥಾನ ನಡುವಣ ಡೇವಿಸ್ ಕಪ್ ಕೂಟ ಸ್ಥಳಾಂತರಗೊಂಡಿದ್ದನ್ನು ಪ್ರತಿಭಟಿಸಿ ಹಿರಿಯ ಆಟಗಾರರಾದ ಐಸಮ್ ಉಲ್ ಹಕ್ ಕುರೇಶಿ ಮತ್ತು ಅಖೀಲ್ ಖಾನ್ ಅವರು ಹಿಂದೆ ಸರಿದಿದ್ದಾರೆ. ಈ ಕಾರಣದಿಂದ ಪಾಕಿಸ್ಥಾನವು ಇಬ್ಬರು 17ರ ಹರೆ ಯದ ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿದೆ.
ಅಖೀಲ ಭಾರತ ಟೆನಿಸ್ ಅಸೋಸಿಯೇಶನ್‌ನ ಕೋರಿಕೆ ಮೇರೆಗೆ ಇಂಟರ್‌ನ್ಯಾಶನಲ್ ಟೆನಿಸ್ ಫೆಡರೇಶನ್ (ಐಟಿಎಫ್) ನ. 29 ಮತ್ತು 30ರಂದು ಇಸ್ಲಾಮಾಬಾದ್‌ನಲ್ಲಿ ನಡೆಯುವ ಡೇವಿಸ್ ಕಪ್ ಹೋರಾಟವನ್ನು ಕಜಾಕ್‌ಸ್ಥಾನದ ನೂರ್ ಸುಲ್ತಾನ್‌ಗೆ ಸ್ಥಳಾಂತರ ಮಾಡಿತ್ತು.
ಪರಿಪೂರ್ಣ ಭಾರತೀಯ ತಂಡದ ವಿರುದ್ಧ ಆಡಲಿರುವ ಪಾಕಿಸ್ಥಾನ ತಂಡದಲ್ಲಿ ಹೆಚ್ಚಿನವರು ಹದಿಹರೆಯದ ಆಟಗಾರರಿದ್ದಾರೆ. ಜೂನಿಯರ್ ಐಟಿಎಫ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 446 ಮತ್ತು 1004ನೇ ರ್‍ಯಾಂಕ್ ಹೊಂದಿರುವ ಹುಜೈಫ ಅಬ್ದುಲ್ ರೆಹಮಾನ್ ಮತ್ತು ಶೋಯಿಬ್ ಖಾನ್ ಅವರು ಪಾಕಿಸ್ಥಾನ ಟೆನಿಸ್ ಫೆಡರೇಶನ್ (ಪಿಟಿಎಫ್) ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯೂಸುಫ್ ಖಾನ್, ಅಹ್ಮದ್ ಕಾಮಿಲ್ ಮತ್ತು ಅಮ್ಜದ್ ತಂಡದಲ್ಲಿರುವ ಇನ್ನುಳಿದ ಮೂವರು ಆಟಗಾರರಾಗಿದ್ದಾರೆ.
ಅಗ್ರ ಕ್ರಮಾಂಕದ ಆಟಗಾರರಾದ ಕುರೇಶಿ ಮತ್ತು ಅಖೀಲ್ ಖಾನ್ ಕೂಟದಿಂದ ಹಿಂದೆ ಸರಿದ ಕಾರಣ ನಾವು ಜೂನಿಯರ್ ಆಟಗಾರರನ್ನು ಆಯ್ಕೆ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಪಿಟಿಎಫ್ ಅಧ್ಯಕ್ಷ ಸಲೀಮ್ ಸೈಫುಲ್ಲಾ ಖಾನ್ ಹೇಳಿದ್ದಾರೆ.
ನಮ್ಮದು ಜೂನಿಯರ್ ತಂಡ
ಇದೊಂದು ಒಳ್ಳೆಯ ಹೋರಾಟವಾಗಿ ಸಾಗಬಹುದಿತ್ತು. ಆದರೆ ಇದೀಗ ಭಾರತಕ್ಕೆ ಸೀಮಿತವಾಗಿದೆ. ನಾವು ಜೂನಿಯರ್ ಆಟಗಾರರನ್ನು ಕಳುಹಿಸುತ್ತಿದ್ದೇವೆ. ನಮ್ಮ ಸೀನಿಯರ್ ಡೇವಿಸ್ ಕಪ್ ಆಟಗಾರರು ಬರುವುದಿಲ್ಲ. ಅವರೆಲ್ಲ 16-17 ವರ್ಷದವರು ಮತ್ತು ಸ್ವಲ್ಪಮಟ್ಟಿಗೆ ಅನುಭ ವ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.
ಈ ಕೂಟವನ್ನು ಭಾರತ ಗೆಲ್ಲಲು ಬಯಸಿತ್ತು. ಹಾಗಾಗಿ ಅವರು ಸುಲಭವಾಗಿ ಗೆಲ್ಲಬಹುದು ಎಂದವರು ಹೇಳಿದರು. ಈ ಕೂಟದ ವಿಜೇತರು 2020ರ ಡೇವಿಸ್ ಕಪ್ ಅರ್ಹತಾ ಪಂದ್ಯಾಟದಲ್ಲಿ ಆಡಲಿದ್ದಾರೆ. ಅಲ್ಲಿ ಗೆದ್ದ ತಂಡವು ವಿಶ್ವಬಣಕ್ಕೆ ತೇರ್ಗಡೆಯಾಗುತ್ತದೆ.