ಲಕ್ನೋ: ಕಳೆದ 21 ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತ ಬಂದ ಕರ್ನಾಟಕದ ಟೆನಿಸಿಗ ರೋಹನ್ ಬೋಪಣ್ಣ ಅವರ ಡೇವಿಸ್ ಕಪ್ ಬಾಳ್ವೆ ಕೊನೆಗೊಳ್ಳುವ ಹಂತಕ್ಕೆ ಬಂದಿದೆ.
ಶುಕ್ರವಾರ ಲಕ್ನೋದಲ್ಲಿ ಮೊರಾಕ್ಕೊ ವಿರುದ್ಧ ಭಾರತ ವರ್ಲ್ಡ್ ಗ್ರೂಪ್-2ನೇ ಸುತ್ತಿನ ಪಂದ್ಯವನ್ನು ಆಡಲಿದ್ದು, ಇದು ಬೋಪಣ್ಣ ಅವರ ಕೊನೆಯ ಡೇವಿಸ್ ಕಪ್ ಸರಣಿ ಆಗಲಿದೆ. ರವಿವಾರ ಅವರು ಕೊನೆಯ ಸಲ ರ್ಯಾಕೆಟ್ ಹಿಡಿದು ಅಂಕಣಕ್ಕಿಳಿಯಲಿದ್ದಾರೆ.
2019ರಲ್ಲಿ ಡೇವಿಸ್ ಕಪ್ ಮಾದರಿಯನ್ನು ಬದಲಿಸಿದ ಬಳಿಕ ಭಾರತ ಇಷ್ಟೊಂದು ಕೆಳ ಹಂತಕ್ಕೆ ತಲುಪಿದ್ದು ಇದೇ ಮೊದಲು. ಕಳೆದ ಮಾರ್ಚ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 2-3 ಅಂತರದಿಂದ ಸೋತಿತ್ತು. ಆದರೆ ಮೊರಾಕ್ಕೊವನ್ನು ಮಣಿಸುವುದು ಸಮಸ್ಯೆಯೇನಲ್ಲ.
ರೋಹನ್ ಬೋಪಣ್ಣ ಮೊನ್ನೆಯಷ್ಟೇ ಯುಎಸ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಫೈನಲ್ ತನಕ ಸಾಗಿದ ಆತ್ಮವಿಶ್ವಾಸದಲ್ಲಿದ್ದಾರೆ. 43ರ ವಯಸ್ಸಿನಲ್ಲೂ ಪವರ್‌ಫುಲ್ ಸರ್ವ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೊಡಗಿನ ಟೆನಿಸಿಗ ಬೋಪಣ್ಣ 2002ರಲ್ಲಿ ಮೊದಲ ಸಲ ಡೇವಿಸ್ ಕಪ್ ಆಡಲಿಳಿದಿದ್ದರು. ಒಟ್ಟು 32 ಪಂದ್ಯಗಳನ್ನಾಡಿದ್ದು, 10 ಸಿಂಗಲ್ಸ್ ಸೇರಿದಂತೆ 22 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಯುಕಿ ಭಾಂಬ್ರಿ ಇವರ ಕೊನೆಯ ಜತೆಗಾರ ನಾಗಲಿದ್ದಾರೆ. ಎಟಿಪಿ ಸರ್ಕ್ನೂಟ್‌ನಲ್ಲಿ ಆಡುವುದನ್ನು ಬೋಪಣ್ಣ ಮುಂದುವರಿಸಲಿದ್ದಾರೆ.
ಭಾರತ ತಂಡ: ಸುಮಿತ್ ನಾಗಲ್, ಶಶಿಕುಮಾರ್ ಮುಕುಂದ್, ದಿಗ್ವಿಜಯ್ ಪ್ರತಾಪ್ ಸಿಂಗ್, ಯುಕಿ ಭಾಂಬ್ರಿ, ರೋಹನ್ ಬೋಪಣ್ಣ. ನಾಯಕ: ರೋಹಿತ್ ರಾಜ್‌ಪಾಲ್.