ದುಬಾೖ: ಹೈದರಾಬಾದ್ ತಂಡದ ಆಸೀಸ್ ಓಪನರ್ ಡೇವಿಡ್ ವಾರ್ನರ್ ಅವರನ್ನು ಸೋಮವಾರದ ರಾಜಸ್ಥಾನ್ ವಿರುದ್ಧದ ಪಂದ್ಯದಿಂದ ಕೈಬಿಟ್ಟಿದ್ದಕ್ಕೆ ತಂಡದ ಕೋಚ್ ಟ್ರೆವರ್ ಬೇಲಿಸ್ ಕಾರಣ ತಿಳಿಸಿದ್ದಾರೆ.
“ನಾವು ಫೈನಲ್ ತಲುಪಲು ಸಾಧ್ಯವಿಲ್ಲ. ಹೀಗಾಗಿ ಕೆಲವು ಯುವ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದೆವು. ಮೈದಾನದಲ್ಲಿ ತಂಡದ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಇಲ್ಲಿನ ಅನುಭವ ಪಡೆಯಲು ಯುವಕರನ್ನು ಕರೆಸಿಕೊಳ್ಳಲಾಗಿದೆ. ಹೀಗಾಗಿ ವಾರ್ನರ್ ಅವರನ್ನು ಹೊಟೇಲ್‌ನಲ್ಲಿಯೇ ಉಳಿಯುವಂತೆ ತಿಳಿಸಲಾಯಿತು’ ಎಂದು ಬೇಲಿಸ್ ಸ್ಪಷ್ಟಪಡಿಸಿದ್ದಾರೆ.
“ನಮ್ಮ ತಂಡದ ಮೀಸಲು ಸಾಮರ್ಥ್ಯ ಉತ್ತಮವಾಗಿದೆ. ಇವರಲ್ಲಿ ಅನೇಕ ಯುವ ಪ್ರತಿಭೆಗಳಿದ್ದಾರೆ. ಅದರಂತೆ ಇನ್ನುಳಿದ ಪಂದ್ಯದ ವೇಳೆಯೂ ವಾರ್ನರ್ ನಿಸ್ಸಂಶಯವಾಗಿ ಹೊಟೇಲ್ ಕೊಠಡಿಯಲ್ಲಿ ಉಳಿದುಕೊಂಡು ಪಂದ್ಯವನ್ನು ವೀಕ್ಷಿಸುವ ಮೂಲಕ ಹುಡುಗರಿಗೆ ಅವಕಾಶ ಮಾಡಿಕೊಡಲಿದ್ದಾರೆ’ ಎಂದು ಬೇಲಿಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್‌ಗೆ ಹೃದಯಾಘಾತ
ವಾರ್ನರ್ ಉಳಿಯುವರೇ?: ಮುಂದಿನ ವರ್ಷ ನಡೆಯುವ ಹರಾಜಿಗೂ ಮುನ್ನ ತಂಡದಲ್ಲಿ ಉಳಿದುಕೊಳ್ಳುವ ಆಟಗಾರರ ಪೈಕಿ ವಾರ್ನರ್ ಇದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೇಲಿಸ್, “ಈ ಬಗ್ಗೆ ನಾವು ಇನ್ನೂಚರ್ಚೆ ನಡೆಸಿಲ್ಲ. ಮೆಗಾ ಹರಾಜಿಗೂ ಮುನ್ನ ಈ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.