Advertisement

ಡೇವಿಡ್‌ ವಾರ್ನರ್‌ ‘ಚೀಟರ್‌’!

03:27 AM May 11, 2019 | Team Udayavani |

ಲಂಡನ್‌: ಕ್ರಿಕೆಟಿನ ಬದ್ಧ ಎದುರಾಳಿಗಳು ಯಾರು? ಭಾರತ-ಪಾಕಿಸ್ಥಾನ ಎಂಬುದು ಸಿದ್ಧ ಉತ್ತರ. ಆದರೆ ಇದು ತಪ್ಪು ಎಂದು ಇತಿಹಾಸ ಸಾರುತ್ತದೆ. ಜಾಗತಿಕ ಕ್ರಿಕೆಟಿನ ಅತ್ಯಂತ ಪುರಾತನ ರಾಷ್ಟ್ರಗಳಾದ ಇಂಗ್ಲೆಂಡ್‌-ಆಸ್ಟ್ರೇಲಿಯಗಳೇ ಬದ್ಧ ಎದುರಾಳಿಗಳಾಗಿವೆ ಎಂಬುದನ್ನು ಇದು ಸಾರುತ್ತ ಬಂದಿದೆ. ಇದರ ತೀವ್ರತೆಯನ್ನು ಅರಿಯಬೇಕಾದರೆ ಪ್ರತಿಷ್ಠಿತ ‘ಆ್ಯಶಸ್‌’ ಸರಣಿಯನ್ನು ಗಮನಿಸಬೇಕು.

Advertisement

ಇದೀಗ ವಿಶ್ವಕಪ್‌ ಸರದಿ. ಆಸ್ಟ್ರೇಲಿಯ ತಂಡ ಇನ್ನೂ ಇಂಗ್ಲೆಂಡಿಗೆ ಕಾಲಿಟ್ಟಿಲ್ಲ, ಅಷ್ಟರಲ್ಲಿ ಇಂಗ್ಲೆಂಡ್‌ ಅಭಿಮಾನಿಗಳ ಸಂಘಟನೆಯಾದ ‘ಬಾರ್ಮಿ ಆರ್ಮಿ’ ಕಾಂಗರೂಗಳನ್ನು ಟ್ರೋಲ್ ಮಾಡಲಾರಂಭಿಸಿದೆ. ಇದಕ್ಕೆ ಮೊದಲು ‘ಬಲಿ’ಯಾದವರು ಆರಂಭಕಾರ ಡೇವಿಡ್‌ ವಾರ್ನರ್‌.

ಬೌಲರ್ ಕೈಯಲ್ಲಿ ಸ್ಯಾಂಡ್‌ ಪೇಪರ್‌!
ಬಾರ್ಮಿ ಆರ್ಮಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ವಾರ್ನರ್‌ ಅವರ ಜೆರ್ಸಿಯ ಮೇಲೆ ‘ಆಸ್ಟ್ರೇಲಿಯ’ ಶಬ್ದವನ್ನು ತೆಗೆದು ಅದರ ಮೇಲೆ ‘ಚೀಟ್ಸ್‌’ (ಮೋಸ) ಎಂದು ಬರೆದ ಚಿತ್ರವೊಂದನ್ನು ಪೋಸ್ಟ್‌ ಮಾಡಿದೆ. ಜತೆಗೆ ಮಿಚೆಲ್ ಸ್ಟಾರ್ಕ್‌, ನಥನ್‌ ಲಿಯೋನ್‌ ಕೂಡ ‘ಬಾರ್ಮಿ ಆರ್ಮಿ’ಯ ಫೋಟೋ ಶಾಪ್‌ ತಂತ್ರಕ್ಕೆ ವಸ್ತುವಾಗಿದ್ದಾರೆ. ಇವರಿಬ್ಬರ ಕೈಯಲ್ಲೂ ಸ್ಯಾಂಡ್‌ ಪೇಪರ್‌ ನೀಡಿ ನಿಲ್ಲಿಸಲಾಗಿದೆ!

ಇದರ ಕಾರಣವನ್ನು ಎಲ್ಲರೂ ಅರಿಯಬಹುದಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ ವಾರ್ನರ್‌, ಸ್ಮಿತ್‌ ಮತ್ತು ಬಾನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿ ಒಂದು ವರ್ಷದ ನಿಷೇಧಕ್ಕೊಳಗಾಗಿದ್ದರು. ಇದಕ್ಕಾಗಿ ಇಲ್ಲಿ ವಾರ್ನರ್‌ ಟ್ರೋಲ್ ಆಗಿದ್ದಾರೆ. ಹಾಗೆಯೇ ವಿಶ್ವಕಪ್‌ ಪಂದ್ಯಾವಳಿ ವೇಳೆ ಸ್ಟಾರ್ಕ್‌, ಲಿಯೋನ್‌ ಕೂಡ ಸ್ಯಾಂಡ್‌ ಪೇಪರ್‌ ಮೂಲಕ ಚೆಂಡನ್ನು ವಿರೂಪಗೊಳಿಸಬಹುದು ಎಂದು ಬಾರ್ಮಿ ಆರ್ಮಿ ವಿಡಂಬನಾತ್ಮಕವಾಗಿ ಎಚ್ಚರಿಸಿದೆ!

ಇದಕ್ಕೆಲ್ಲ ಸಜ್ಜಾಗಿಯೇ ಬರಲಿದ್ದೇವೆ!
ಇದಕ್ಕೆ ಪ್ರತಿಕ್ರಿಯಿಸಿದ ಆಸೀಸ್‌ ಕೋಚ್ ಜಸ್ಟಿನ್‌ ಲ್ಯಾಂಗರ್‌, ‘ಇದ ಕ್ಕೆಲ್ಲ ನಾವು ಸಿದ್ಧರಾಗಿದ್ದೇವೆ. ಇಂಗ್ಲೆಂಡ್‌ನ‌ಲ್ಲಿ ವಿಮಾನ ಇಳಿದೊಡನೆ ನಮಗೆ ಇಂಥ ಸ್ವಾಗತ ಕಾದಿರುತ್ತದೆಂಬುದು ಗೊತ್ತು. ನಾವು ಇದನ್ನು ಎದುರಿಸಲು ಸನ್ನದ್ಧರಾಗಿರುತ್ತೇವೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next