ಕಥಾನಾಯಕನಿಗೆ ಗೆಳೆತನ ಅಂದ್ರೆ ಇಷ್ಟ. ಅದೇ ಪ್ರೀತಿ-ಪ್ರೇಮ ಅಂದ್ರೆ ಬಲುದೂರ. ತಮ್ಮ ಸ್ನೇಹಿತರ ಬಳಗದಲ್ಲಿ ಯಾರಾದರೂ ಲವ್ ಮಾಡುತ್ತಿದ್ದರೆ, ಅವರ ಪ್ರೇಮಭಂಗ ಮಾಡುವವರೆಗೂ ಈ ಹುಡುಗನಿಗೆ ಸಮಾಧಾನವಿಲ್ಲ. ಇಂಥ ಹುಡುಗನಿಗೆ ಒಮ್ಮೆ ಸುಂದರ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಪ್ರೇಮಾಂಕುರವಾಗುತ್ತದೆ. ಇನ್ನೇನು ಆ ಹುಡುಗಿಯ ಎದುರಿಗೆ ನಿಂತು ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಆಕೆ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಆ ಹುಡುಗಿಯ ತಂದೆ, ತನ್ನ ಜೀವದಂತಿದ್ದ ಸ್ನೇಹಿತ ಇಬ್ಬರೂ ನಿಗೂಢವಾಗಿ ಅಪರಿಚಿತರ ಗುಂಡಿಗೆ ಬಲಿಯಾಗುತ್ತಾರೆ. ಅಲ್ಲಿಯವರೆಗೂ ಲವ್, ಫ್ರೆಂಡ್ ಶಿಪ್, ಕಾಮಿಡಿ ಅಂತ ಸರಾಗವಾಗಿ ಸಾಗುತ್ತಿದ್ದ ಕಥೆಯಲ್ಲಿ ರಕ್ತದೋಕುಳಿ ಹರಿದು, ಸಿನಿಮಾದಲ್ಲೊಂದು ಮರ್ಡರ್ ಮಿಸ್ಟರಿ ತೆರೆದುಕೊಳ್ಳುತ್ತದೆ. “ಡೇವಿಡ್’ ಎಂಬ ಅನಾಮಿಕನ ಹುಡುಕಾಟ ಶುರುವಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಡೇವಿಡ್’ ಸಿನಿಮಾದ ಕಥೆಯ ಎಳೆ.
ಇಷ್ಟು ಹೇಳಿದ ಮೇಲೆ “ಡೇವಿಡ್’ ಲವ್ ಕಂ ಮರ್ಡರ್ ಮಿಸ್ಟರಿ ಕಥಾಹಂದರದ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಒಂದಷ್ಟು ಸ್ನೇಹಿತರ ನಡುವಿನ ಹುಡುಗಾಟದ ಮೂಲಕ ಶುರುವಾಗುವ ಸಿನಿಮಾದ ಕಥೆಯಲ್ಲಿ ಲವ್, ಮರ್ಡರ್, ಆ್ಯಕ್ಷನ್, ಸಸ್ಪೆನ್ಸ್ ಎಲ್ಲವನ್ನೂ ಸೇರಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಾಯಕ ನಟ ಕಂ ನಿರ್ದೇಶಕ ಶ್ರೇಯಸ್ ಚಿಂಗಾ.
ಸಿನಿಮಾದ ಕಥೆಯ ಒಂದು ಎಳೆ ಚೆನ್ನಾಗಿದೆ. ಕಥೆಯ ಆಯ್ಕೆಯಲ್ಲಿ ಕೊಟ್ಟಂತಹ ಮಹತ್ವ ಚಿತ್ರಕಥೆ, ನಿರೂಪಣೆಯ ಕಡೆಗೂ ಕೊಟ್ಟಿದ್ದರೆ, “ಡೇವಿಡ್’ ಇನ್ನಷ್ಟು ಪರಿಣಾಮಕಾರಿಯಾಗಿ ನೋಡುಗರ ಮನ ಮುಟ್ಟುವ ಸಾಧ್ಯತೆಗಳಿದ್ದವು. ಅದರಾಚೆಗೆ “ಡೇವಿಡ್’ ಒಂದು ಪ್ರಯತ್ನವಾಗಿ ಮೆಚ್ಚುಬಹುದಾದ ಚಿತ್ರ.
ಸಿನಿಮಾದಲ್ಲಿ ಬೃಹತ್ ಕಲಾವಿದರಿದ್ದರೂ, ನಾಯಕಿ ಸಾರಾ, ರಾಕೇಶ್ ಅಡಿಗ, ಅವಿನಾಶ್, ಪ್ರತಾಪ್ ನಾರಾಯಣ್ ಸೇರಿದಂತೆ ಒಂದಷ್ಟು ಪಾತ್ರಗಳು ಮಾತ್ರ ಪರಿಣಾಮಕಾರಿಯಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ ಕಾರ್ಯ ಗಮನ ಸೆಳೆಯುತ್ತದೆ.
ಹಿನ್ನೆಲೆ ಸಂಗೀತದ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ಹೇಳುವುದಾದರೆ, ಬಹುತೇಕ ಹೊಸ ಪ್ರತಿಭೆಗಳ “ಡೇವಿಡ್’ ಒಮ್ಮೆ ನೋಡಿ ಬೆನ್ನುತಟ್ಟಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್