ಜರ್ಮನಿಯ ಗಾಟಿಂಗೆನ್ ವಿಶ್ವವಿದ್ಯಾಲಯದಲ್ಲಿ ನೂರು ವರ್ಷಗಳ ಹಿಂದೆ ಒಂದು ಪದ್ಧತಿ ಇತ್ತಂತೆ. ಅದೇನೆಂದರೆ, ಅಲ್ಲಿಗೆ ಯಾರಾದರೂ ಹೊಸಬರು ಪ್ರಾಧ್ಯಾಪಕರಾಗಿ ನೇಮಕವಾಗಿ ಬಂದರೆ, ಅವರು ವಿಶ್ವವಿದ್ಯಾಲಯದ ಉಳಿದೆಲ್ಲ ಸಹೋದ್ಯೋಗಿಗಳನ್ನು ತಾವಾಗಿಯೇ ಭೇಟಿಯಾಗಿ ಪರಿಚಯ ಮಾಡಿಕೊಳ್ಳಬೇಕು. ಗಾಟಿಂಗೆನ್ ವಿಶ್ವವಿದ್ಯಾಲಯದ ಆಸುಪಾಸಿನಲ್ಲಿಯೇ ಪ್ರಾಧ್ಯಾಪಕರ ಮನೆಗಳೆಲ್ಲವೂ ಇದ್ದವು. ಹೊಸಬನಾಗಿ ಬಂದವನು, ಪ್ರತಿ ದಿನ ಸಂಜೆ, ಒಂದಷ್ಟು ಮನೆಗಳಿಗೆ ಭೇಟಿಕೊಟ್ಟು, ತನ್ನ ಪರಿಚಯ ಮಾಡಿಕೊಳ್ಳಬೇಕಿತ್ತು. ಸರಿ, ಗಾಟಿಂಗೆನ್ನಿಗೆ ಬಂದಿಳಿದ ಹೊಸಬನೊಬ್ಬ, ಈ ಸಂಪ್ರದಾಯವನ್ನು ಪಾಲಿಸಲು ನಿರ್ಧರಿಸಿದ. ಒಂದಷ್ಟು ಮನೆಗಳಿಗೆ ಸೌಹಾರ್ದ ಭೇಟಿಕೊಟ್ಟ. ಮುಂದಿನ ಸರದಿ ಇದ್ದುದು ಡೇವಿಡ್ ಹಿಲ್ಬರ್ಟ್ ಮನೆ. ಹಿಲ್ಬರ್ಟ್ ಪ್ರಸಿದ್ಧ ಗಣಿತಜ್ಞ. ಕೇವಲ ಜರ್ಮನಿಯಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಹೆಸರಾದ ವ್ಯಕ್ತಿ.
ಫರ್ಮಾನ ಕೊನೆಯ ಪ್ರಮೇಯಕ್ಕೆ ಉತ್ತರ ತೆಗೆದಿದ್ದೇವೆಂದು ಯಾರಾದರೂ ಪತ್ರ ಕಳಿಸಿದರೆ, ಅದು ಪರಿಶೀಲನೆಗೆ ಬರುತ್ತಿದ್ದುದು ಹಿಲ್ಬರ್ಟ್ ಬಳಿ. ಗಣಿತವಲ್ಲದೆ ಬೇರೇನನ್ನೂ ಮಾಡದ, ಯೋಚಿಸದ ವ್ಯಕ್ತಿ ಆತ. ಈ ಹೊಸಬ, ಅದೊಂದು ಸಂಜೆ ಹಿಲ್ಬರ್ಟರ ಮನೆಗೆ ಹೋದ. ಅತಿಥಿಯನ್ನು ಸ್ವಾಗತಿಸಿ ಪಡಸಾಲೆಯ ಕುರ್ಚಿಯಲ್ಲಿ ಕೂರಿಸಿದ ಹಿಲ್ಟರ್ಟರ ಪತ್ನಿ, ತನ್ನ ಪತಿಯನ್ನು ಅಲ್ಲಿಗೆ ಬರುವಂತೆ ಕರೆದಳು.
ಯಾವುದೋ ಗಣಿತ ಸಮಸ್ಯೆಯೊಳಗೆ ಮುಳುಗಿಹೋಗಿದ್ದ ಹಿಲ್ಬರ್ಟ್, ಮನಸ್ಸಿಲ್ಲದ ಮನಸ್ಸಿಂದ ಬಂದು ಪಡಸಾಲೆಯಲ್ಲಿ ಕೂತ. ಹೊಸ ಸಹೋದ್ಯೋಗಿಯನ್ನು ಪರಿಚಯಿಸಿಕೊಂಡ. ಔಪಚಾರಿಕವಾಗಿ ನಾಲ್ಕು ಮಾತಾಡಿದ. ಆದರೆ ಅದೇನು ವಿಶೇಷ ಕಂಡನೋ ಹೊಸಬ; ಹಿಲ್ಬರ್ಟನ ಬಳಿ ಪಟ್ಟಾಂಗ ಹೊಡೆಯಲು ಇಳಿದುಬಿಟ್ಟ. ಹಿಲ್ಬರ್ಟನ ಪ್ರತಿಕ್ರಿಯೆಯನ್ನೆಲ್ಲ ತನ್ನ ಮಾತಿಗೆ ಉತ್ತೇಜಕವೆಂದುಕೊಂಡನೋ ಏನೋ, ಮಾತಾಡುತ್ತ ಬಹಳ ಹೊತ್ತು ಅಲ್ಲಿ ಪಟ್ಟಾಗಿ ಕೂತೇ ಇದ್ದ. ಬಹಳಷ್ಟು ಹೊತ್ತು ಸರಿದು ಹೋದ ಮೇಲೆ ಅದೊಂದು ಕ್ಷಣ ನಿರ್ಧರಿಸಿದವನಂತೆ ಹಿಲ್ಬರ್ಟ್ ಎದ್ದ. ಅತಿಥಿಯು ಮೇಜಿನ ಮೇಲಿರಿಸಿದ್ದ ಟೋಪಿ ಧರಿಸಿದವನೇ- ಕ್ಷಮಿಸಿ ಇವರೇ, ನಾನು ಬಂದು ಬಹಳ ಹೊತ್ತಾಯಿತು. ನಿಮಗೆ ಏನು ಕೆಲಸ ಇತ್ತೋ ಏನೋ.. ಮುಂದುವರಿಸಿ. ನಾನಿನ್ನು ಬರುವೆ ಎಂದು ಹೇಳಿ ಬಾಗಿಲು ದಾಟಿ ಅಂಗಳಕ್ಕಿಳಿ ದೇಬಿಟ್ಟ!
ರೋಹಿತ್ ಚಕ್ರತೀರ್ಥ