Advertisement

ಜ್ಞಾನ ಮುಖ್ಯವೇ ಹೊರತು ಅಂಕವಲ್ಲ

11:34 AM Dec 18, 2019 | Naveen |

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾನ ಮುಖ್ಯವೇ ಹೊರತು ಅಂಕಗಳಲ್ಲ. ಜ್ಞಾನದ ಹಸಿವಿದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

Advertisement

ಮಂಗಳವಾರ ಜಿಲ್ಲಾಢಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದೇವರಾಜ ಅರಸು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ಐಎಎಸ್‌, ಐಪಿಎಸ್‌, ಕೆಎಎಸ್‌, ಪಿಎಸ್‌ಐ ಹಾಗೂ ಬ್ಯಾಂಕಿಂಗ್‌ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗಬಾರದು, ಅದು ನಮ್ಮ ವ್ಯಕ್ತಿತ್ವದ ಅನಾವರಣವಾಗಬೇಕು ಎಂದರು.

ಮಾರ್ಕ್ಸ್ ಕಾರ್ಡ್‌ ನೋಡಿ ಕೆಲಸ ನೀಡುವ ಪ್ರವೃತ್ತಿ ಇಂದು ಬದಲಾಗುತ್ತಿದೆ. ಸರ್ಕಾರಿ ಕೆಲಸ ಪಡೆಯಲು ಎಲ್ಲರೂ ಸಮಾನ ಅವಕಾಶ ಹೊಂದಿರುತ್ತಾರೆ. ಜ್ಞಾನವಿರುವವರು ಸತತ ಪರಿಶ್ರಮದಿಂದ ಸರ್ಕಾರಿ ಹುದ್ದೆ ಪಡೆಯುತ್ತಾರೆ. ಈ ಪ್ರಪಂಚದಿಂದ ನಾವು ಹೋದರೂ ನಮ್ಮ ಗುರುತು ಅಚ್ಚಳಿಯದೇ ಇರಬೇಕು ಅಂತಹ ಸಾಧನೆ ನಾವು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಯಾವ ರೀತಿ ಇರಬೇಕು ಎಂಬುದನ್ನು ನಾವು ಮೊದಲು ತಿಳಿಯಬೇಕು. ಸಾಧನೆಗೆ ರಂಗ ಮುಖ್ಯವಲ್ಲ . ಸಾಧಿಸುವ ಛಲ ಹೊಂದಬೇಕು. ಐ.ಎ.ಎಸ್‌, ಐ.ಪಿ.ಎಸ್‌, ಕೆ.ಎ.ಎಸ್‌., ಪಿ.ಎಸ್‌.ಐ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳು ನಮ್ಮ ವ್ಯಕ್ತಿತ್ವ ಮತ್ತು ಸಮಾಜದ ಬಗ್ಗೆ ನಾವು ಹೊಂದಿರುವ ಕಾಳಜಿಯನ್ನು ಪರೀಕ್ಷಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಷಯದ ಆಯ್ಕೆಯಲ್ಲಿ ಜಾಗೃತಿ ವಹಿಸಿ. ಓದಿನ ಅಂತರಿಕ ಅಧ್ಯಯನ ಮುಖ್ಯವಾಗುತ್ತದೆ. ಆದ್ದರಿಂದ ಹಲವು ವಿಷಯಗಳ ಬಗ್ಗೆ ಗೊಂದಲ ಮೂಡಿಸಿಕೊಳ್ಳದೇ ಒಂದೇ ವಿಷಯವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅಕಾಡೆಮಿಯ ಪರೀಕ್ಷೆಗಳ ನಡುವಿನ ವ್ಯತ್ಯಾಸಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನಿಷ್ಠೆಯಿಂದ ದಿನಕ್ಕೆ ಒಂದು ಪುಟ ಓದಿದರೂ ನಾವು ಜ್ಞಾನದ ಮಾಲೀಕರಾಗುತ್ತೇವೆ. ಇತರರನ್ನು ದೂಷಿಸುವ ಸ್ವಭಾವ ಬದಲಾಗಬೇಕು. ಸ್ವ ಪ್ರೇರಣೆಯಿಂದ ಓದಿನಲ್ಲಿ ಆಸಕ್ತಿ ಹೊಂದಬೇಕು. ಯಶಸ್ಸು ಸಣ್ಣದಾಗಿಯೇ ಆರಂಭವಾಗುತ್ತದೆ. ಸತತ ಪರಿಶ್ರಮದಿಂದ ಗುರಿ ಸಾಧಿ ಸುವ ಛಲವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಅವರು ತಿಳಿಸಿದರು.

Advertisement

ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್‌ ಮಾತನಾಡಿ, ಪರೀಕ್ಷೆ, ಸಾಧನೆ ಎಂಬುದು ಒಂದು ತಪಸ್ಸು. ಎಷ್ಟು ಓದಿದ್ದೇವೆ ಎಂಬುದಕ್ಕಿಂತ ಎಷ್ಟು ಮನನ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಪರೀಕ್ಷಾಭ್ಯಾಸ ಆರಂಭಿಸಿದಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಆದರೆ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ದ್ವಾರುಕೇಶ್‌, ನಿವೃತ್ತ ಯೋಧ ಮಂಜಾನಾಯ್ಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮುದುಕಣ್ಣನವರ್‌, ಸಂಪನ್ಮೂಲ ವ್ಯಕ್ತಿ ಎಲ್‌. ರಾಮಚಂದ್ರರಾವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next