ದಾವಣಗೆರೆ: ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್‌ಸಿ) ಜಾರಿ ಹಿನ್ನೆಲೆಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಡಿ. 21ರ ವರೆಗೆ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ.
ಬುಧವಾರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ತಮ್ಮ ಕಚೇರಿ ಸಭಾಂಗಣದಲ್ಲಿ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಧವಾರ ರಾತ್ರಿ 8 ಗಂಟೆಯಿಂದಲೇ 144ನೇ ಸೆಕ್ಷನ್ ಜಾರಿಯಾಗಲಿದ್ದು, ಡಿ.21 ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲಾದ್ಯಂತ ಸೆಕ್ಷನ್ ಜಾರಿಯಲ್ಲಿರಲಿದೆ ಎಂದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ತಾಲೂಕುಗಳ ದಂಡಾಧಿಕಾರಿಗಳು, ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ ಅವರು, ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಪಾಲನೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎಡಿಜಿಪಿಯವರು ಈ ತಕ್ಷಣದಿಂದಲೇ 144ನೇ ಸೆಕ್ಷನ್ ಜಾರಿಗೊಳಿಸುವಂತೆ ಸೂಚನೆ ನೀಡಿದ್ದು, ಶಾಂತಿ ಪಾಲನೆಗಾಗಿ ಪೊಲೀಸ್ ಇಲಾಖೆ, ಕೆಎಸ್‌ಆರ್‌ಟಿಸಿ, ಶಿಕ್ಷಣ, ಹೋಂಗಾರ್ಡ್ಸ್, ಬೆಸ್ಕಾಂ, ಅಗ್ನಿಶಾಮಕ ದಳ, ಅರಣ್ಯ ಸೇರಿದಂತೆ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಪಡೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೋಷಿಯಲ್ ಮೀಡಿಯಾ ಬಗ್ಗೆಯೂ ಕಟ್ಟೆಚ್ಚರ ವಹಿಸಲಾಗುವುದು ಎಂದರು.
ಮುಂಬರುವ ದಿನಗಳಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಯೂ ಇದ್ದು ಎಲ್ಲರೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕೆಂದರು. ಸಭೆಯಲ್ಲಿ ಅಪರ ಪ್ರಭಾರ ಜಿಲ್ಲಾಕಾರಿ ನಜ್ಮಾ.ಜಿ, ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್, ಎಎಸ್‌ಪಿ ರಾಜೀವ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಡಿವೈಎಸ್‌ಪಿಗಳಾದ ಮಂಜುನಾಥ್ ಗಂಗಲ್, ನಾಗೇಶ್ ಐತಾಳ್, ತಹಶೀಲ್ದಾರ್‌ಗಳಾದ ಸಂತೋಷ್‌ಕುಮಾರ್, ತಿಮ್ಮಣ್ಣ ಹುಲ್ಮನಿ, ರಾಮಚಂದ್ರಪ್ಪ, ಆರ್‌ಟಿಓ ಎನ್.ಜೆ.ಬಣಕಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.