Advertisement

ಕಾಯಿಲೆ ಬರುವ ಮುನ್ನ ಎಚ್ಚರಿಕೆ ವಹಿಸಿ

10:09 AM Aug 31, 2019 | Naveen |

ದಾವಣಗೆರೆ: ಯಾವುದೇ ಕಾಯಿಲೆ ಬಂದ ನಂತರ ಚಿಕಿತ್ಸೆ ನೀಡಿ ಗುಣಪಡಿಸುವ ಬದಲು ಆ ಕಾಯಿಲೆ ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ದಾವಣಗೆರೆ ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಆರೋಗ್ಯ ಇಲಾಖೆ ಅಧಿಕಾರಿಗೆ ತಿಳಿಸಿದ್ದಾರೆ.

Advertisement

ಶುಕ್ರವಾರ, ತಮ್ಮ ಕಚೇರಿಯಲ್ಲಿ ರಾಷ್ಟ್ರೀಯ ಫ್ಲೋರೊಸೀಸ್‌ ತಡೆ ಹಾಗೂ ಆರ್‌.ಬಿ.ಎಸ್‌.ಕೆ. ಕಾರ್ಯಕ್ರಮ ಮತ್ತು ಆಶಾ ಕಾರ್ಯಕರ್ತೆಯರ ಕುಂದುಕೊರತೆ ಬಗ್ಗೆ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಫ್ಲೋರೈಡ್‌ ಅಧಿಕ ಪ್ರಮಾಣದಲ್ಲಿರುವ ನೀರು ಮತ್ತು ಇತರೆ ಆಹಾರ ಪದಾರ್ಥಗಳು, ಔಷಧಗಳಿಂದ ಫ್ಲೋರೋಸಿಸ್‌ ಬರುವುದು. ವಯಸ್ಸಿನ ಅಂತರ, ಲಿಂಗಭೇದವಿಲ್ಲದೆ ಚಿಕ್ಕ ಮಕ್ಕಳು, ವಯಸ್ಕರು, ಎಲ್ಲರಲ್ಲೂ ಫ್ಲೋರೋಸಿಸ್‌ ಕಂಡು ಬರುತ್ತದೆ. ಈ ಕಾಯಿಲೆ ಒಮ್ಮೆ ಬಂದರೆ ಗುಣಪಡಿಸಲು ಯಾವುದೇ ಸೂಕ್ತ ಔಷಧಗಳಿಲ್ಲದ ಕಾರಣ ಅಗತ್ಯ ಮುಂಜಾಗ್ರತಾ ಕ್ರಮ ಪಾಲಿಸಬೇಕು ಎಂದರು.

ಜಿಲ್ಲಾ ಫ್ಲೋರೋಸಿಸ್‌ ನಿಯಂತ್ರಣ ಸಲಹೆಗಾರ ಬಿ.ಎಂ.ಸಿದ್ದಯ್ಯ ಮಾತನಾಡಿ, ರಾಜ್ಯದ 19 ಜಿಲ್ಲೆಗಳಲ್ಲಿ ಫ್ಲೋರೋಸಿಸ್‌ ಕಾಯಿಲೆ ಕಾಣಿಸಿಕೊಂಡಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯಲ್ಲಿ ಹರಿಹರ ಮತ್ತು ಜಗಳೂರು ತಾಲೂಕಿನಲ್ಲಿ ಈ ಕಾಯಿಲೆಗೆ ಒಳಗಾದವರ ಸಂಖ್ಯೆ ಶೇ.30 ರಷ್ಟಿದೆ. ಈ ಕಾಯಿಲೆಯಲ್ಲಿ ದಂತ, ಮೂಳೆ ಮತ್ತು ದೇಹದ ಇತರೆ ಭಾಗಗಳ ಫ್ಲೋೕರೋಸಿಸ್‌ ಎಂಬ ಮೂರು ವಿಧಗಳಿವೆ. ಫ್ಲೋರೈಡ್‌ಯುಕ್ತ ಅಂತರ್ಜಲ ನೀರು, ಕಪ್ಪು ಕಲ್ಲುಪ್ಪು, ಅಡಿಕೆ, ಹೊಗೆಸೊಪ್ಪು ಸೇವನೆ, ತಿಂಡಿ ತಿನಿಸುಗಳಲ್ಲಿನ ಫ್ಲೋರೈಡ್‌ ಅಂಶ, ಸೋಡಿಯಂ ಫ್ಲೋರೈಡ್‌ ಮಾತ್ರೆ, ಮಂಪರು ಔಷಧ, ಫೋರೈಡ್‌ ಇರುವ ಧೂಳು, ಗಣಿ ಕಾರ್ಖಾನೆಗಳಿಂದ ಹೊರಹೊಮ್ಮುವ ಹೊಗೆ ಸೇವನೆ ಸೇರಿದಂತೆ ಸಮಸ್ಯೆ ಉಂಟಾಗಲಿದೆ ಎಂದರು.

ಅಂತರ್ಜಲ ಸೇವನೆಯಿಂದಲೇ ಶೇ.70 ರಷ್ಟು ಈ ಕಾಯಿಲೆ ಉಂಟಾಗುತ್ತದೆ. ದಂತ ಫ್ಲೋರೋಸಿಸ್‌ 5 ರಿಂದ 8 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಲ್ಲಿನ ಮೇಲೆ ಹಳದಿ ಬಣ್ಣದ ಅಥವಾ ಕಂದು ಬಣ್ಣದ ಕಲೆಗಳು ಉಂಟಾಗಿ, ಅವು ಶಾಶ್ವತವಾಗಿ ಉಳಿಯುತ್ತವೆ ಎಂದರು.

ಮೂಳೆ ಫ್ಲೋರೋಸಿಸ್‌ನಿಂದ ಮೂಳೆಗಳ ನೋವು, ಕೀಲುಗಳ ಬಿಗಿತ, ನರಗಳ ಎಳೆತದಿಂದಾಗಿ ಕತ್ತಿನ ಮೂಳೆ ಮತ್ತು ಬೆನ್ನಿನ ಎಲುಬುಗಳ ಬಾಗುವಿಕೆ, ನರಗಳ ತೊಂದರೆ ಹಾಗೂ ಬೆನ್ನುಮೂಳೆಗಳ ಸಂಕುಚಿತ ಉಂಟಾಗುತ್ತದೆ. ಇನ್ನೂ ಮೂರನೇ ವಿಧದಲ್ಲಿ ದೇಹದ ಮೃದು ಅಂಗಾಂಗಗಳಲ್ಲಿ ಸ್ನಾಯು ಹಾಗೂ ಕೆಂಪು ರಕ್ತ ಕಣಗಳು, ಜೀರ್ಣಾಗಾಂಗಗಳು ಮುಂತಾದವುಗಳಲ್ಲಿ ಹರಡಿ, ಹೊಟ್ಟೆನೋವು, ಭೇದಿ ಮತ್ತು ಅರ್ಜೀಣತೆ ಉಂಟಾಗುತ್ತದೆ. ಇದರಿಂದ ಸ್ನಾಯುಗಳ ದೌರ್ಬಲ್ಯ, ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರಕ್ಕೆ ಹೋಗುವುದು ಇತ್ಯಾದಿ ತೊಂದರೆಗಳು ಕಾಣಸಿಕೊಳ್ಳುತ್ತವೆ ಎಂದು ಮಾಹಿತಿ ನೀಡಿದರು.

Advertisement

ಈ ಕಾಯಿಲೆೆ ಒಮ್ಮೆ ಬಂದರೆ ಗುಣಪಡಿಸಲು ಯಾವುದೇ ಔಷಧಗಳಿಲ್ಲದ ಕಾರಣ ಹರಡುವ ಮುನ್ನ ಮುಂಜಾಗ್ರತಾ ಕ್ರಮ ವಹಿಸಬೇಕು. ಫ್ಲೋರೈಡ್‌ ಅಂಶ ಹೆಚ್ಚಿರುವ ನೀರು, ಆಹಾರ ಪದಾರ್ಥಗಳ ಬಳಕೆ ಕಡಿಮೆ ಮಾಡಬೇಕು. ಮಕ್ಕಳಿಗೆ ಸೂಕ್ತ ಟೂತ್‌ಪೇಸ್ಟ್‌ಗಳ ಬಳಕೆಗೆ ಸೂಚಿಸಬೇಕು. ಹಾಲು, ಬೆಲ್ಲ, ಹಸಿರುಸೊಪ್ಪು, ನುಗ್ಗೆಕಾಯಿ ಬಳಕೆ ಹೆಚ್ಚಿಸಬೇಕು. ವಿಟಮಿನ್‌ ಸಿ ಅಂಶಗಳುಳ್ಳ ಸೀಬೆ, ನಲ್ಲಿಕಾಯಿ, ನಿಂಬೆ, ಕ್ಯಾರೆಟ್, ಕಿತ್ತಳೆ ಹಾಗೂ ಮೊಸಂಬಿ, ಇತರೆ ಪದಾರ್ಥಗಳಾದ ಬೆಳ್ಳುಳ್ಳಿ, ಈರುಳ್ಳಿ, ಪರಂಗಿಹಣ್ಣು, ಗೆಣಸು ಉಪಯೋಗಿಸಬೇಕು ಎಂದ ಅವರು, ಈಗಾಗಲೇ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಈ ಕಾಯಿಲೆಗೆ ಒಳಾಗದವರನ್ನು ಗುರುತಿಸಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.

ಆರ್‌.ಬಿ.ಎಸ್‌.ಕೆ. ವೈದ್ಯಾಧಿಕಾರಿ ಮಂಜುನಾಥ್‌ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯದ ಬಗ್ಗೆ ವಿವರಿಸಿದರು.

ತಾಲ್ಲೂಕು ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಸುರೇಖಾ, ಸರ್ಕಾರದ ವಿವಿಐ ಯೋಜನೆಗಳಡಿ ನಿರ್ವಹಿಸುತ್ತಿರುವ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬೇಬಿ ಸುನೀತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಉಮಾಪತಿ, ಕಾರ್ಯಕ್ರಮ ವ್ಯವಸ್ಥಾಪಕ ಪಿ.ವಿ. ರವಿ, ದಾವಣಗೆರೆ ಉತ್ತರದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ್‌, ಇತರೆ ಇಲಾಖೆ ಅಧಿಕಾರಿಗಳು, ವೈದ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next