ದಾವಣಗೆರೆ: ಸ್ಮಾರ್ಟ್‌ಸಿಟಿ ಮಿಷನ್ ಫೆ.1 ರಿಂದ ಪ್ರಾರಂಭಿಸಿರುವ ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ದಾವಣಗೆರೆ ಜಿಲ್ಲಾವಾರು ನಂಬರ್ 1ನೇ ಸ್ಥಾನದಲ್ಲಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ. ಮಲ್ಲಾಪುರ ತಿಳಿಸಿದ್ದಾರೆ.
ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ 4,615 ಜನರ ಗುರಿ ನಿಗದಿಪಡಿಸಲಾಗಿತ್ತು. ದಾವಣಗೆರೆಯಲ್ಲಿ 7,852(ಶೇ.170.14) ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಿಗದಿತ ಗುರಿ 90,266 ಜನರಿಗೆ45,083(ಶೇ.50.74) ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಮಿಷನ್ ನಾಗರಿಕರಿಗೆ ಯೋಗ್ಯವಾದ ಜೀವನ ಮಟ್ಟ ನೀಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯ ನಗರದಲ್ಲಿ ಶಿಕ್ಷಣ, ಆರೋಗ್ಯ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಇತರೆ ವಿಷಯಗಳ ಕುರಿತಾಗಿ ಫೆ.1 ರಿಂದ ಪ್ರಾರಂಭಿಸಿರುವ ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಆಯ್ಕೆಯಾಗಿರುವ ಸ್ಮಾರ್ಟ್‌ಸಿಟಿ ಯೋಜನೆಯ ಜಿಲ್ಲಾವಾರುನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರೆ, ದೇಶದ 114 ನಗರಗಳಲ್ಲಿ 40ನೇ ಸ್ಥಾನ, ರಾಜ್ಯವಾರು ನೋಡಿದರೆ ಅರುಣಾಚಲ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ 26ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ಸಾರ್ವಜನಿಕರು ಫೆ.29ರ ವರೆಗೆ ಭಾಗವಹಿಸಿ, ಅತ್ಯಂತ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ದಾವಣಗೆರೆಯನ್ನು ಮೊದಲನೇ ಸ್ಥಾನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಸ್ಮಾರ್ಟ್‌ಸಿಟಿ ಯೋಜನೆ ಸಿಬ್ಬಂದಿ ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ವನಿತಾ ಮತ್ತು ಮಹಿಳಾ ಸಮಾಜ ಒಳಗೊಂಡಂತೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಕಡೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗುತ್ತಿದೆ. ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು. ಇಂತಹವರೇ ಭಾಗವಹಿಸಬೇಕು ಎಂದು ಇಲ್ಲ ಎಂದು ತಿಳಿಸಿದರು.
ದಾವಣಗೆರೆ ನಗರದ ಭವಿಷ್ಯವನ್ನು ಉನ್ನತ ಮಟ್ಟಕ್ಕೇರಿಸಲು ಸಾರ್ವಜನಿಕರು ಮುಕ್ತವಾಗಿ ಸುಲಲಿತ ಜೀವನ(ಇಸ್ ಆಫ್ ಲೀವಿಂಗ್) ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಆಯಾಯ ನಗರದ ಶೇ.1 ರಷ್ಟು ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅಗತ್ಯ ಇದೆ. ಆದರೆ, ನಮ್ಮಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆ ಮುಖ್ಯ ಅಭಿಯಂತರ ಸತೀಶ್, ಪ್ರಧಾನ ವ್ಯವಸ್ಥಾಪಕ(ಆಡಳಿತ) ಚಂದ್ರಶೇಖರ್, ಹಿರಿಯ ಸಹಾಯಕ ವಾರ್ತಾಧಿಕಾರಿ ಡಿ. ಅಶೋಕ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.